ಕೆಂಪೇಗೌಡರ ಅದ್ದೂರಿ ಜಯಂತಿ

ಬೆಂಗಳೂರು, ಆ. ೧೬- ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಅಂಗವಾಗಿ ಇಂದು ನಗರದೆಲ್ಲೆಡೆ ಸಂಭ್ರಮದ ವಾತಾವರಣ. ನಾಲ್ಕು ಗಡಿ ಗೋಪುರಗಳಿಂದ ಕೆಂಪೇಗೌಡರ ದಿವ್ಯಜ್ಯೋತಿಯ ಮೆರವಣಿಗೆ ಸಾಂಸ್ಕೃತಿಕ ಕಲಾ ಪ್ರಕಾರಗಳ ಕಲರವ.
ನಗರದ ಲಾಲ್‌ಬಾಗ್, ಕೆಂಪಾಬುದಿ ಕೆರೆ, ಹಲಸೂರು, ಮೇಕ್ರಿವೃತ್ತ, ಅಲ್ಲದೆ ಮಾಗಡಿ ಕೆಂಪಾಪುರ ಗ್ರಾಮದಿಂದ ಕೆಂಪೇಗೌಡರ ದಿವ್ಯಜ್ಯೋತಿಯ ಮೆರವಣಿಗೆ ಕೇಂದ್ರ ಕಛೇರಿ ತಲುಪುತ್ತಿದ್ದಂತೆ ಮೇಯರ್ ಸಂಪತ್ ರಾಜ್ ಅವರು ಬರಮಾಡಿಕೊಂಡರು.
ನಂದಿಧ್ವಜ, ಕೀಲುಕುದುರೆ, ಡೊಳ್ಳು ಕುಣಿತ, ಪಟಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಕೆಂಪೇಗೌಡ ದಿವ್ಯಜ್ಯೋತಿಗೆ ಯಾತ್ರೆಗೆ ಮತ್ತಷ್ಟು ರಂಗನ್ನು ತಂದುಕೊಟ್ಟವು. ಬೆಳಗ್ಗೆ ಮೇಯರ್ ಸಂಪತ್ ರಾಜ್, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಎಂ. ಶಿವರಾಜ್, ಪ್ರತಿಪಕ್ಷದ ಪದ್ಮನಾಭರೆಡ್ಡಿ, ಆಯುಕ್ತ ಮಂಜುನಾಥ ಪ್ರಸಾದ್ ಅವರು ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿರುವ ಲಕ್ಷ್ಮೀ ದೇವಿ ಪುತ್ಥಳಿ ಹಾಗೂ ಪಾಲಿಕೆ ಮುಂಭಾಗದ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕೆಂಪೇಗೌಡರ ಜಯಂತಿ ಚಾಲನೆ ನೀಡಿದರು.
ಲಾಲ್‌ಬಾಗ್‌ನ ಕೆಂಪೇಗೌಡ ಗಡಿಗೋಪುರಕ್ಕೆ ಉಪಮುಖ್ಯಮಂತ್ರಿ ಪರಮೇಶ್ವರ್, ಶಾಸಕ ಉದಯ್ ಗರುಡಾಚಾರ್, ಮೇಯರ್ ಸಂಪತ್ ರಾಜ್ ಅವರಿಗೆ ಗಡಿಗೋಪುರಕ್ಕೆ ಪೂಜೆ ಸಲ್ಲಿಸುವ ಮೂಲಕ ಜ್ಯೋತಿ ಯಾತ್ರೆಗೆ ಚಾಲನೆ ನೀಡಿದರು.
ನಂತರ ನಾಲ್ಕು ದಿಕ್ಕುಗಳಿಂದಲೂ ದಿವ್ಯಜ್ಯೋತಿ ಮೆರವಣಿಗೆಗೆ ಆಯಾಯ ವಾರ್ಡ್ ಸದಸ್ಯರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಕೆಂಪೇಗೌಡರ ಜಯಂತಿಯ ಹಬ್ಬದ ಸಂಭ್ರಮದ ವಾತಾವರಣ ಮೂಡಿದ್ದು, ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನೃತ್ಯ ಪ್ರಕಾರಗಳ ಕಲಾವಿದರು ಹೆಜ್ಜೆಗೆ ಹೆಜ್ಜೆ ಹಾಕುತ್ತಾ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿ ವಿದ್ಯುತ್ ದೀಪ ಮತ್ತು ಹೂವಿನ ಅಲಂಕಾರಗಳಿಂದ ಕಂಗೊಳಿಸುತ್ತಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೇಂದ್ರ ಕಚೇರಿಯ ಮುಖ್ಯದ್ವಾರವನ್ನು ಹೊರತುಪಡಿಸಿ, ಇತರ ಭಾಗಗಳಿಂದ ಪ್ರವೇಶಕ್ಕೆ ಅವಕಾಶ ಕಲ್ಪಿಸಿರಲಿಲ್ಲ.

Leave a Comment