ಕೆಂಪು ಇಟ್ಟಿಗೆ: ಮಾಲೀಕರ ವಿರುದ್ಧ ಕ್ರಮಕ್ಕೆ ಒತ್ತಾಯ

ರಾಯಚೂರು.ಫೆ.12- ಕೆಂಪು ಇಟ್ಟಿಗೆ ಬಟ್ಟಿಗಳ ಆಂಧ್ರ ಮೂಲದ ಖಾಸಗಿ ಮಾಲೀಕರು ಕಾನೂನು ಬಾಹೀರ ವ್ಯವಹಾರ, ಕಾರ್ಮಿಕರ ಹಕ್ಕು ಹಾಗೂ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಉಲ್ಲಂಘನೆ ಮಾಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಜೈ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಪದಾಧಿಕಾರಿಗಳು ಒತ್ತಾಯಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿ ಕಾರ್ಯಾಲಯದ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿ, ತಾಲೂಕಿನ ಕಡಗಂದೊಡ್ಡಿ ಹಾಗೂ ಕಟ್ಲಟಕೂರು ವ್ಯಾಪ್ತಿಯಲ್ಲಿ 26 ಕೆಂಪು ಇಟ್ಟಿಗೆ ಬಟ್ಟಿಗಳನ್ನು ಕಾನೂನು ಬಾಹೀರವಾಗಿ ವ್ಯವಹಾರವು ನಡೆಯುತ್ತಿದೆ. ಆಂಧ್ರ ಮೂಲದ ವಲಸಿಗರಾದ ಪುಲ್ಲಾರಾವ್, ದೊಡ್ಡಶೇಖರ, ಸಣ್ಣಶೇಖರ, ಸುಬ್ಬಾರಾವ್, ಭಾಸ್ಕರ್, ಸತೀಶ್ ಸೇರಿದಂತೆ ರವಿ, ಪೊಟ್ಟು ನರಸಿಂಹಲು, ಸಾಕಲು ಈರಣ್ಣ ಸೇರಿದಂತೆ ಇನ್ನಿತರರು ಇಟ್ಟಿಗೆ ಬಟ್ಟಿಗಳ ಮೂಲಕ ವಾರ್ಷಿಕ ಕೋಟ್ಯಾಂತರ ರೂ. ವ್ಯವಹಾರ ಮಾಡುತ್ತಿದ್ದಾರೆಂದು ಆರೋಪಿಸಿದರು.
ಕಡಗಂದೊಡ್ಡಿ ಹಾಗೂ ಕಟ್ಲಟಕೂರು ಕೆರೆಗಳಿಂದ ಲಕ್ಷಾಂತರ ರೂ. ಬೆಲೆಬಾಳುವ ಸರಕಾರಿ ಮಣ್ಣನ್ನು ಗುಡ್ಡೆ ಹಾಕಿಕೊಂಡು ರಾಯಲ್ಟಿ ಕಟ್ಟದೇ ಆಂಧ್ರ ಹಾಗೂ ಕರ್ನಾಟಕ ಜಿಲ್ಲೆಗಳಿಂದ ರಾತ್ರೋರಾತ್ರಿ ಕಟ್ಟಿಗೆ ಮರದ ದಿಮ್ಮೆಗಳು ರಾಶಿ-ರಾಶಿ ಬಂದು ಬೀಳುತ್ತಿವೆ. ಗಿಡ-ಮರಗಳನ್ನು ರಾತ್ರಿ ಸುಡಲಾಗುತ್ತದೆ. ಅರಣ್ಯ ಇಲಾಖೆ ಅನುಮತಿ ಪಡೆದಿರುವುದಿಲ್ಲವೆಂದು ದೂರಿದರು.
ಇಷ್ಟೆಲ್ಲಾ ಬಹಿರಂಗವಾಗಿ ನಡೆಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಸಮನಹರಿಸುತ್ತಿಲ್ಲವೆಂದರು. ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳು ಈ ಕುರಿತು ಕೂಲಂಕುಶವಾಗಿ ಪರಿಶೀಲಿಸಿ, ತಪ್ಪಿತಸ್ಥರ ಬಟ್ಟಿಗಳನ್ನು ರದ್ದುಪಡಿಸಲು ಹಾಗೂ ಕಾರ್ಮಿಕ ಹಕ್ಕುಗಳನ್ನು ಮತ್ತು ಮಕ್ಕಳ ಸುರಕ್ಷಿತೆ ದೃಷ್ಠಿಯಲ್ಲಿಟ್ಟುಕೊಂಡು ಈ ಕೂಡಲೇ ವಿಶೇಷ ಅಧಿಕಾರಿಗಳನ್ನು ನೇಮಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಎನ್.ಶರಣಪ್ಪ, ಜಿಲ್ಲಾಧ್ಯಕ್ಷ ಎಂ.ವಸಂತ ಕುಮಾರ್, ಶರಣಬಸವ, ಎ.ರಮೇಶ ವಡವಾಟಿ, ಅನೀಲಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment