ಕೆಂಪಕೆರೆ- ವರದಿ ನೀಡಲು ಶಾಸಕರ ಸೂಚನೆ

ಹುಬ್ಬಳ್ಳಿ,ಆ.6- ಕೆಂಪಕೆರೆಯನ್ನು ಮತ್ತೊಮ್ಮೆ ಸರ್ವೇ ಮಾಡಿ ಕೆರೆಯ ಸರಹದ್ದನ್ನು  ಗುರುತಿಸಿ ವಾರದೊಳಗೆ ವರದಿ ನೀಡಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಅವರು ಸರ್ವೇ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಕಾರವಾರ ರಸ್ತೆಯ ಕೆಂಪಕೆರೆಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಭಾನುವಾರ ಪರಿಶೀಲಿಸಿದ ಅವರು, ಬಡವರು, ಮಧ್ಯಮ ವರ್ಗದ ಜನರೇ ಅತಿ ಹೆಚ್ಚು ವಾಸಿಸುವ ನನ್ನ ಕ್ಷೇತ್ರದಲ್ಲೊಂದು ಸುಂದರ ಪ್ರವಾಸಿ ತಾಣವನ್ನಾಗಿ ಕೆಂಪಕೆರೆಯನ್ನು ಅಭಿವೃದ್ಧಿಗೊಳಿಸುವ ಕನಸು ನನ್ನದಾಗಿದ್ದು, ಈಗಾಗಲೇ ಈ ಕೆರೆಯ ಅಭಿವೃದ್ಧಿಗೆ 6 ಕೋ.ರೂ. ಅನುದಾನ ಮಂಜೂರಾಗಿದೆ. ಆದರೆ, ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ಸರ್ವೇ ಅಧಿಕಾರಿಗಳು ಶೀಘ್ರ ಕೆರೆಯ ಬೌಂಡರಿ ಗುರುತಿಸಿ ಕೊಡುವಂತೆ ಸೂಚಿಸಿದರು.
ಕೆರೆಯ ಸುತ್ತಳತೆ ಮೇಲ್ನೋಟಕ್ಕೆ 14 ಎಕರೆಯಷ್ಟಿದೆ. ಸುಭಾಷ ನಗರದಿಂದ ಬರುವ ಕೊಳಚೆ ನೀರು ಕೆರೆಯನ್ನು ಸೇರದಂತೆ ಹಾಗೂ ಭರ್ತಿಯಾದ ಕೆರೆಯ ನೀರು ಕೋಡಿ ಮೂಲಕ ಹರಿದು ಹೋಗಲು ಕೈಗೊಂಡ ಕ್ರಮದ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನಿಸಿದರು. ತ್ಯಾಜ್ಯ ನೀರು ಕೆರೆ ಸೇರದಂತೆ ತಡೆಯಲು ಕೆರೆಯ ಸಮೀಪವೇ 3 ಎಂ.ಎಲ್.ಡಿ. ಸಾಮಥ್ರ್ಯದ ತ್ಯಾಜ್ಯ ನೀರು ಸಂಗ್ರಹ ಘಟಕ (ಎಸ್.ಟಿ.ಪಿ.) ನಿರ್ಮಿಸುವಂತೆ ಹಾಗೂ ಕೆರೆಗೆ ನೀರು ತುಂಬಿಸಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೆರೆಯ ಅಭಿವೃದ್ಧಿಗೆ ಮತ್ತಷ್ಟು ಅನುದಾನ ತರಲು ಸಿದ್ದವಿರುವುದಾಗಿ ತಿಳಿಸಿದರು.
ಪಾಲಿಕೆ ಸದಸ್ಯರಾದ ದಶರಥ ವಾಲಿ, ಮಂಜುನಾಥ ಚಿಂತಗಿಂಜಲ, ವಿಜನಗೌಡ ಪಾಟೀಲ, ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್, ತಹಸೀಲ್ದಾರ್ ಶಶಿಧರ ಮಾಡ್ಯಾಳ, ಸರ್ವೇ ಸೂಪರ್ ವೈಸರ್ ಜೋಶಿ, ರಾಷ್ಟ್ರೀಯ ಹೆದ್ದಾರಿಯ ಈಶ್ವರಪ್ಪ, ಸಣ್ಣ ನೀರಾವರಿ ಇಲಾಖೆಯ ಅಣ್ಣಿಗೇರಿ, ಅಮೃತ್ ಯೋಜನೆಯ ಮಿಶ್ರಿಕೋಟಿ, ಪಾಲಿಕೆ ಅಧಿಕಾರಿಗಳಾದ ಮಹೇಶ ಅರಳಿಹೊಂಡ, ಬಸವರಾಜ ಲಮಾಣಿ, ಆನಂದ ಕಾಂಬ್ಳೆ, ಮುಖಂಡರಾದ ಮಹೇಂದ್ರ ಸಿಂಘಿ, ಪ್ರಸನ್ನ ಮಿರಜಕರ್, ಬಾಗಣ್ಣ ಬಿರಾಜದಾರ, ಮಂಜು ಉಪ್ಪಾರ, ಇತರರು ಉಪಸ್ಥಿತರಿದ್ದರು.

Leave a Comment