ಕೆಂಕೆರೆ ಗ್ರಾ.ಪಂ.ನಿಂದ ಕ್ರೀಡಾ ಸಾಮಗ್ರಿ ವಿತರಣೆ

ಹುಳಿಯಾರು, ಮೇ ೨೫- ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯ್ತಿ ವತಿಯಿಂದ ಗ್ರಾಮೀಣ ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸುವ ಸಲುವಾಗಿ 14ನೇ ಹಣಕಾಸು ಯೋಜನೆಯಡಿ ಶಾಲೆಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಕೆಂಕೆರೆ ಗ್ರಾ.ಪಂ. ವ್ಯಾಪ್ತಿಯ ಕೆ.ಸಿ.ಪಾಳ್ಯ, ಹೊನ್ನಯ್ಯನಪಾಳ್ಯ, ಬರದಲೇಪಾಳ್ಯ ಹಾಗೂ ಕೆಂಕೆರೆಯ ಶಾಲೆಗಳಿಗೆ ವಾಲಿಬಾಲ್, ಕೇರಂ ಬೋರ್ಡ್, ಷಟಲ್ ಬ್ಯಾಟ್, ಚೆಸ್ ಬೋರ್ಡ್ ಸೇರಿದಂತೆ ಅಗತ್ಯ ಕ್ರೀಡಾ ಉಪಕರಣಗಳನ್ನು ನೀಡಲಾಯಿತು.

ಗ್ರಾ.ಪಂ. ಅಧ್ಯಕ್ಷೆ ಆಶಾಉಮೇಶ್ ಮಾತನಾಡಿ, ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಆಗುತ್ತದೆ. ಅದರಲ್ಲೂ ಕ್ರೀಡೆಯಲ್ಲಿ ತೊಡಗುವುದರಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮೀಣ ಮಕ್ಕಳು ಕ್ರೀಡಾ ಸಲಕರಣೆಯಿಲ್ಲದೆ ಕ್ರೀಡಾ ಕಲಿಕೆಯಿಂದ ವಂಚಿತರಾಗಬಾರದೆಂದು ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಪಿಡಿಓ ತೇಜಸ್, ಉಪಾಧ್ಯಕ್ಷ ಜಯಣ್ಣ, ಗ್ರಾ.ಪಂ. ಸದಸ್ಯರುಗಳಾದ ನಾಗಣ್ಣ, ಮಂಗಳಮ್ಮ, ಗಣೇಶ್, ಬಸವರಾಜು, ರಾಮಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

Share

Leave a Comment