ಕೃಷ್ಣಾ – ಸಮತೋಲನಾ ಜಲಾಶಯ ಯೋಜನೆ ಅನುಷ್ಠಾನಕ್ಕೆ ಆಗ್ರಹ

ಗ್ರಾಮಾಂತರ ಕ್ಷೇತ್ರ : 32 ಕೋಟಿ ಅಭಿವೃದ್ಧಿ ಹಣ ಕಡಿತ
ರಾಯಚೂರು.ಅ.09- ತಮ್ಮ ಕ್ಷೇತ್ರದ 60 ಗ್ರಾಮಗಳ ಕುಡಿವ ನೀರಿನ ಸೌಕರ್ಯ ಮತ್ತು ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆ ಭಾಗದ ರೈತರ ನೀರಾವರಿ ಸಮಸ್ಯೆ ನಿವಾರಣೆಗೆ ಕೃಷ್ಣಾ ನದಿಯಿಂದ ಗಣೇಕಲ್ ಜಲಾಶಯಕ್ಕೆ 0.75 ಟಿಎಂಸಿ ನೀರು ಹರಿಸುವ ಯೋಜನೆಗೆ ಈಗಾಗಲೇ ಬಜೆಟ್‌ನಲ್ಲಿ ಘೋಷಣೆಯಾಗಿದ್ದು, ಈ ಹಂತದಲ್ಲಿ 3 ಟಿಎಂಸಿ ಯೋಜನೆ ಗೊಂದಲ ಉದ್ದೇಶಿತ ಯೋಜನೆಯ ಸ್ಥಗಿತಗೊಳಿಸುವ ತಂತ್ರವಾಗಿದೆಂದು ಗ್ರಾಮಾಂತರ ಶಾಸಕ ದದ್ದಲ ಬಸವನಗೌಡ ಅವರು ಆರೋಪಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯ ಸರ್ಕಾರ ನೀತಿ ಆಯೋಗದಡಿ ಆಯ್ಕೆಗೊಂಡ ಮಹತ್ವಾಕಾಂಕ್ಷಿ ಯೋಜನೆ ಆಯ್ಕೆಯಾದ ಜಿಲ್ಲೆಯ ಸಮಗ್ರಾಭಿವೃದ್ಧಿ ಚರ್ಚೆ ಒಂದೆಡೆ ನಡೆಸುತ್ತಿದ್ದರೇ, ಮತ್ತೊಂದೆಡೆ ಮಹತ್ವದ ಯೋಜನೆಗಳನ್ನು ವಿಳಂಬ ಅಥವಾ ರದ್ದು ಪಡಿಸಲಾಗುತ್ತಿದೆ. ಗ್ರಾಮಾಂತರ ಕ್ಷೇತ್ರದ ಒಂದರಲ್ಲಿಯೇ ಸುಮಾರು 32 ಕೋಟಿ ರೂ. ಕಾಮಗಾರಿ ರದ್ದು ಪಡಿಸಿ ಹಣ ಬೇರೆಡೆ ಕೊಂಡೊಯ್ಯಲಾಗಿದೆ.
ಕೃಷ್ಣಾದಿಂದ ಗಣೇಕಲ್ ಜಲಾಶಯಕ್ಕೆ ನೀರು ಹರಿಸುವ ಯೋಜನೆಗೆ ಈಗಾಗಲೇ 149 ಕೋಟಿ ಅಂದಾಜು ಮಾಡಲಾಗಿದೆ. ಕಾಮಗಾರಿ ವಿಳಂಬದಿಂದಾಗಿ ಪರಿಷ್ಕೃತ ಅಂದಾಜು 49 ಕೋಟಿ ಅಧಿಕವಾಗಿದೆ. ಒಟ್ಟು 189 ಕೋಟಿ ಕಾಮಗಾರಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಬೇಕು. ಆದರೆ, ಈ ಹಂತದಲ್ಲಿ 3 ಟಿಎಂಸಿ ನೀರು ಪೂರೈಕೆಯ ಯೋಜನೆಯ ಬಗ್ಗೆ ಪ್ರಸ್ತಾಪಿಸುತ್ತಿರುವುದು ಉದ್ದೇಶಿತ ಯೋಜನೆಯನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ.
ಕೃಷ್ಣಾ ನದಿ ನೀರು ಆಂಧ್ರ, ತೆಲಂಗಾಣ, ಕರ್ನಾಟಕ ಮಧ್ಯೆ ಹರಿದು ಹೋಗುತ್ತದೆ. 3 ಟಿಎಂಸಿ ನೀರಿನ ಯೋಜನೆ ರೂಪಿಸಬೇಕಾದರೇ, ನೆರೆಯ ರಾಜ್ಯಗಳ ಅನುಮೋದನೆ ಅಗತ್ಯ. ಇದಕ್ಕೆ ನೆರೆ ರಾಜ್ಯಗಳು ಸಹಮತಿಸುವುದಿಲ್ಲ. ಯೋಜನೆಯನ್ನು ವಿವಾದಕ್ಕೆ ಗುರಿ ಮಾ‌ಡುವ ಉದ್ದೇಶದಿಂದ ಈ ರೀತಿ ಅನಗತ್ಯ ಬದಲಾವಣೆಯ ಕಾರಣ ಹೇಳಲಾಗುತ್ತಿದೆ.
ಚಿಕ್ಕಮಂಚಾಲಿಯಿಂದ ಮಂತ್ರಾಲಯಕ್ಕೆ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಬಜೆಟ್‌ನಲ್ಲಿ ಅಂಗೀಕಾರಗೊಂಡಿದೆ. ಆದರೆ, ಈ ಯೋಜನೆಯನ್ನು ಸಹ ಅನುಷ್ಠಾನಗೊಳಿಸುತ್ತಿಲ್ಲ. ತಮ್ಮ ಕ್ಷೇತ್ರದಲ್ಲಿ ಒಟ್ಟು 425 ಕೋಟಿ ಯೋಜನೆ ನೆನೆಗುದಿಗೆ ಬೀಳುವಂತಾಗಿದೆ. ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಕೆರೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಹಂತದಲ್ಲಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ 14 ಕೋಟಿ ಹಾಗೂ 3054 ಯೋಜನೆಯಡಿ 10 ಕೋಟಿ ಅನುದಾನ ಕ‌ಡಿತಗೊಳಿಸಲಾಗಿದೆ.
ವಿಧಾನಸಭಾ ಅಧಿವೇಶನದಲ್ಲಿ ಎಲ್ಲಾ ವಿಷಯ ಚರ್ಚಿಸುವುದಾಗಿ ಹೇಳಿದ ಅವರು, ಹಿಂದುಳಿದ ಜಿಲ್ಲೆಯ ತಮ್ಮ ಕ್ಷೇತ್ರದಲ್ಲಿ ಯಾವುದೇ ಯೋಜನೆ ಕಡಿತಗೊಳಿಸದೇ, ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಬೇಕೆಂದು ಒತ್ತಾಯಿಸಲಾಗುತ್ತಿದೆ. ಅಧಿವೇಶನವನ್ನು ಕೇವಲ ಮೂರು ದಿನಕ್ಕೆ ಸೀಮಿತಗೊಳಿಸದೇ, 10 ದಿನಗಳ ಕಾಲ ನಡೆಸಬೇಕೆಂದು ಆಗ್ರಹಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಜಿಲ್ಲೆಗೆ ಭೇಟಿ ನೀಡಿ, ಇಲ್ಲಿಯ ಸಮಸ್ಯೆ ಬಗ್ಗೆ ಗಮನ ಹರಿಸಬೇಕಾಗಿತ್ತು.
ಆದರೆ, ಉಸ್ತುವಾರಿ ಸಚಿವರಾದ ನಂತರ ಒಮ್ಮೆಯೂ ಜಿಲ್ಲೆಗೆ ಭೇಟಿ ನೀಡದಿರುವುದು ಶೋಚನೀಯವಾಗಿದೆ. ಅಧಿವೇಶನ ಪೂರ್ವ ಇಲ್ಲಿಯ ಸಮಸ್ಯೆ ಅರಿತು ಸರ್ಕಾರದ ಗಮನಕ್ಕೆ ತರುವ ಜವಾಬ್ದಾರಿ ಸ್ಥಾನದಲ್ಲಿರುವ ಉಸ್ತುವಾರಿ ಸಚಿವರು ಈ ಬಗ್ಗೆ ನಿರ್ಲಕ್ಷ್ಯೆ ವಹಿಸಿರುವುದು ಖಂಡನೀಯವೆಂದರು.

Leave a Comment