ಕೃಷ್ಣಾ ನದಿ ಪ್ರವಾಹ ಯಥಾರೀತಿ : ಎಚ್ಚರಿಕೆ ಕ್ರಮ

ರಾಯಚೂರು.ಆ.01- ನಾರಾಯಣಪೂರ ಜಲಾಶಯದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ನಡುಗಡ್ಡೆ ನಿವಾಸಿಗಳು ಜಲಾವೃತಗೊಂಡು ಜನ ಸಂಪರ್ಕ ಕಳೆದುಕೊಂಡಿದ್ದರೇ, ಮತ್ತೊಂದೆಡೆ ಶೀಲಹಳ್ಳಿ ಮತ್ತು ಹೂವಿನಹಡಗಲಿ ಸೇತುವೆ ಮುಳುಗುವ ಮಟ್ಟದಲ್ಲಿ ನೀರು ಹರಿಯುತ್ತಿದೆ.
ಆ.1 ರಂದು ಬೆಳಗಿನ ಜಾವ 12 ಗಂಟೆಗೆ 2.06 ಲಕ್ಷ ಕ್ಯೂಸೆಕ್ ಇದ್ದ ನೀರಿನ ಪ್ರವಾಹ ಮುಂಜಾನೆ 7 ಗಂಟೆ ಅವಧಿಗೆ 10 ಸಾವಿರ ಕ್ಯೂಸೆಕ್ ನೀರಿನ ಹೊರ ಹರಿವು ಕಡಿತಗೊಳಿಸಲಾಗಿ, ನದಿಗೆ 1.96 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿದೆ. ಭಾರೀ ಪ್ರಮಾಣದ ಹಿನ್ನೆಲೆಯಲ್ಲಿ ಲಿಂಗಸೂಗೂರು ತಾಲೂಕಿನ ತವದಹಳ್ಳಿ (ಶೀಲಹಳ್ಳಿ) ನಡುಗಡ್ಡೆ ಜನ ಸಂಪರ್ಕ ಕಳೆದುಕೊಳ್ಳುವಂತಾಗಿದೆ. ಶೀಲಹಳ್ಳಿ-ಹಂಚಿನಾಳ ಗ್ರಾಮದ ಮಧ್ಯೆ ನಿರ್ಮಾಣವಾಗಿದೆ.
ಕೆಳ ಭಾಗದಲ್ಲಿ ಕವಲೊಡೆದು ಹರಿಯುವ ನದಿ ಮತ್ತೇ ಮುಂದೆ ಕೃಷ್ಣಾ ನದಿಗೆ ಸೇರುತ್ತದೆ. ಈ ಮಧ್ಯದ ನಡುಗಡ್ಡೆಯಲ್ಲಿ 20 ದಲಿತ ಕುಟುಂಬಗಳು ನೂರಾರು ಎಕರೆ ಜಮೀನು ಉಳಿವಿಗೆ ಅಲ್ಲೆ ವಾಸವಾಗಿದ್ದಾರೆ. ನದಿ ಪ್ರವಾಹ ಬಂದ ಪ್ರತಿ ಅವಧಿಯಲ್ಲಿಯೂ ನಡುಗಡ್ಡೆ ಮುಳುಗಡೆಗೊಂಡು ಜನ ಸಂಕಷ್ಟಕ್ಕೆ ಗುರಿಯಾಗುತ್ತಾರೆ. ಕೃಷ್ಣಾ ನದಿಯಲ್ಲಿ ಭಾರೀ ನೀರಿನ ಪ್ರವಾಹದ ಹಿನ್ನೆಲೆಯಲ್ಲಿ ನಡುಗಡ್ಡೆ ಜನ ಜಲಾವೃತಗೊಂಡು ನೀರಿನಲ್ಲಿಯೇ ನಡೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೃಷ್ಣಾ ನದಿಯಲ್ಲಿರುವ ಎರಡು ಸೇತುವೆಗಳು ಮುಳುಗುವ ಹಂತದಲ್ಲಿವೆ. ಈ ಸೇತುವೆ ಸಂಚಾರ ನಿರ್ಬಂಧಿಸಲಾಗಿದೆ. ಭಾರೀ ಪ್ರವಾಹದ ಹಿನ್ನೆಲೆಯಲ್ಲಿ ಸುರಕ್ಷತೆಗಾಗಿ ಅನೇಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.
ಈಗಾಗಲೇ ಬೋಟ್ ವ್ಯವಸ್ಥೆ ಮಾಡಲಾಗಿದ್ದು, ಸುರಕ್ಷತೆಗಾಗಿ ಜಾಕೇಟ್ ಸಹ ನೀಡಲಾಗಿದೆ. ನದಿಯಲ್ಲಿ ಪ್ರವಾಹ ಮಟ್ಟ ಯಥಾರೀತಿಯಲ್ಲಿರುವುದರಿಂದ ಯಾರು ಸಹ ನದಿ ಪ್ರದೇಶದತ್ತ ಹೋಗದಿರಲು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ವೀಕ್ಷಿಸಿದ್ದಾರೆ. ಜಿಲ್ಲಾಡಳಿತ ಪ್ರವಾಹದ ಹಿನ್ನೆಲೆಯಲ್ಲಿ ನದಿ ಪಾತ್ರದ ಬಗ್ಗೆ ವಿಶೇಷ ನಿಗಾ ವಹಿಸಿದೆ. ಜನವಸತಿ ಪ್ರದೇಶಗಳಿಗೆ ಅಧಿಕಾರಿಗಳನ್ನು ಕಳುಹಿಸಿ, ಕಾಲ ಕಾಲಕ್ಕೆ ಪರಿಶೀಲಿಸಲಾಗುತ್ತಿದೆ.

Leave a Comment