ಕೃಷಿ ಸಾಲದ ಮೇಲಿನ ಸುಸ್ತಿ ವಸೂಲಾತಿಗೆ ತಡೆ

ಬೆಂಗಳೂರು, ಜ. ೨೨- ಸುಸ್ತಿ ಕೃಷಿ ಸಾಲಗಳ ವಸೂಲಾತಿಗೆ ಸಹಕಾರ ಬ್ಯಾಂಕ್ ಹಾಗೂ ಸಂಘಗಳ ಕೃಷಿ ಸಾಲ ವಸೂಲಾತಿಗೆ ತಡೆ ನೀಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ. ಗೃಹ ಮತ್ತು ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಅವರ ಸೂಚನೆಯ ಮೇರೆಗೆ ಸುಸ್ತಿ ಕೃಷಿ ಸಾಲಗಳ ವಸೂಲಾತಿಗೆ ಸಂಬಂಧಿಸಿದಂತೆ ಈ ಹಿಂದೆ ಹೊರಡಿಸಲಾಗಿದ್ದ ಸುತ್ತೋಲೆಯನ್ನು ಮುಂದಿನ ಆದೇಶದವರೆಗೂ ತಡೆ ಹಿಡಿಯಲಾಗಿದೆ ಎಂದು ಸಹಕಾರ ಸಂಘಗಳ ನಿಬಂಧಕ ಎನ್‌.ಎಸ್ ಪ್ರಸನ್ನ ಕುಮಾರ್ ಆದೇಶದಲ್ಲಿ ಸೂಚಿಸಿದ್ದಾರೆ.

ಈ ಸಂಬಂಧ ಸುಸ್ತಿ ಕೃಷಿ ಸಾಲ ವಸೂಲಾತಿಯ ಜವಾಬ್ದಾರಿ ಹೊತ್ತಿದ್ದ ಕಾಸ್ಕಾರ್ಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿರುವ ಅವರು, ಸುಸ್ತಿ ಕೃಷಿ ಸಾಲಗಳ ವಸೂಲಾತಿಯನ್ನು ಕೂಡಲೇ ತಡೆ ಹಿಡಿಯಲು ಸೂಚನೆ ನೀಡಿ, ಇದನ್ನು ಕಾಸ್ಕಾರ್ಡ್ ಬ್ಯಾಂಕಿನ ಎಲ್ಲ ಜಿಲ್ಲಾ-ಶಾಖೆಗಳಿಗೆ ಪಿಕಾರ್ಡ್ ಬ್ಯಾಂಕುಗಳಿಗೆ ಕೂಡಲೇ ತಿಳಿಸಿ, ವರದಿ ಮಾಡುವಂತೆ ಹೇಳಿದ್ದಾರೆ.

ಕೃಷಿ ಸಾಲಗಳ ವಸೂಲಾತಿ ಮಾಡದಂತೆ ವಿಧಿಸಿದ್ದ ನಿರ್ಬಂಧವನ್ನು ರಾಜ್ಯಸರ್ಕಾರ ತೆಗೆದು ಹಾಕಿ ಸುಸ್ತಿ ಸಾಲ ವಸೂಲಾತಿಗೆ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಸಹಕಾರ ಬ್ಯಾಂಕ್ ಮತ್ತು ಸಂಘಗಳಿಗೆ ಸೂಚಿಸಲಾಗಿತ್ತು. ಸರ್ಕಾರದ ಈ ಕ್ರಮಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ಹೊಸದಾಗಿ ಆದೇಶ ಹೊರಡಿಸಿ, ಕೃಷಿ ಸಾಲ ವಸೂಲಾತಿಗೆ ತಡೆ ನೀಡಲಾಗಿದೆ.

Leave a Comment