ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಸರ್ಕಾರದ ಯೋಜನೆಗಳ ಮಾಹಿತಿ

ತಿಪಟೂರು, ಆ. ೨೬- ಕೃಷಿ ವಿಜ್ಞಾನ ಕೇಂದ್ರ, ಕೊನೇಹಳ್ಳಿ ವತಿಯಿಂದ ಕರ್ನಾಟಕ ಕೃಷಿ ಬೆಲೆ ಆಯೋಗ, ಕರ್ನಾಟಕ ಸರ್ಕಾರ ಪ್ರಾಯೋಜಿತ ರೈತರ ಆದಾಯ ಮತ್ತು ಕಲ್ಯಾಣವೃದ್ಧಿ ಯೋಜನೆಯಡಿ ತಾಲ್ಲೂಕಿನ ಹುಲ್ಲುಕಟ್ಟೆ ಗ್ರಾಮದಲ್ಲಿ ರೈತರಿಗೆ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳ ಮಾಹಿತಿಗಾಗಿ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿದ್ದ ಈಚನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಿರೀಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ದೊರೆಯಬಹುದಾದ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ ಕೃಷಿ ಅಧಿಕಾರಿ ಸವಿತ, ಕೃಷಿ ಇಲಾಖೆಯ ಕೃಷಿ ಭಾಗ್ಯ, ಕೃಷಿ ಯಂತ್ರೋಪಕರಣ ಯೋಜನೆಗಳ ಅಡಿಯಲ್ಲಿಯೇ ರೈತರ ಮನೆ ಬಾಗಿಲಲ್ಲಿಯೇ ರಸಗೊಬ್ಬರ, ಬಿತ್ತನೆ ಬೀಜಗಳನ್ನು ರಿಯಾಯ್ತಿ ದರದಲ್ಲಿ ದೊರೆಯುವಂತೆ ಮಾಡಿರುವುದಲ್ಲದೆ, ಕೃಷಿ ಯಂತ್ರೋಪಕರಣ ಯೋಜನೆ ಮೂಲಕ, ರೈತರಿಗೆ ಅಗತ್ಯವಿರುವ ಕೃಷಿ ಯಂತ್ರಗಳಾದ ಟ್ರಾಕ್ಟರ್, ಟಿಲ್ಲರ್, ನಾಟಿಯಂತ್ರ, ಕಳೆ ತೆಗೆಯುವ ಯಂತ್ರ, ಔಷಧಿ ಸಿಂಪರಣೆ ಇನ್ನಿತರ ಯಂತ್ರಗಳನ್ನು ಅತ್ಯಂತ ಕಡಿಮೆ ಬಾಡಿಗೆಯಲ್ಲಿ ಒದಗಿಸುತ್ತಿದೆ. ಅಲ್ಲದೆ ರೈತ ಸಂಪರ್ಕ ಕೇಂದ್ರಗಳ ಮೂಲಕ ತಾಂತ್ರಿಕ ಸಲಹೆಗಳನ್ನು ಸಹ ನೀಡುತ್ತಿದ್ದು, ಇವುಗಳ ಸಹಾಯ ಪಡೆದು, ರೈತರು ಹೆಚ್ಚು ಲಾಭ ಪಡೆಯುವಂತಾಗಬೇಕು ಎಂದರು.

ಇದೇ ರೀತಿ ತೋಟಗಾರಿಕಾ ಇಲಾಖೆಯ ಅಧಿಕಾರಿ ರತ್ನಮ್ಮ, ಪಶು ಸಂಗೋಪನಾ ಇಲಾಖೆಯ ವಿಸ್ತರಣಾ ಅಧಿಕಾರಿ ಮಹೇಶ್, ರೇಷ್ಮೆ ಇಲಾಖೆಯ ವಿಸ್ತರಣಾ ಅಧಿಕಾರಿ ಶಿವನಂಜಪ್ಪ, ಅರಣ್ಯ ಪಾಲಕಿ ನೀಲಮ್ಮ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಅವರುಗಳು ರೈತರಿಗೆ ತಮ್ಮ ತಮ್ಮ ಇಲಾಖೆಯಲ್ಲಿ ಲಭ್ಯವಿರುವ ಯೋಜನೆಗಳ ಬಗ್ಗೆ ಸವಿವರವಾಗಿ ತಿಳಿಸಿ, ಯೋಜನೆಗಳ ಲಾಭ ಪಡೆಯುವಂತೆ ಮನವಿ ಮಾಡಿದರು.

ಕರ್ನಾಟಕ ಕೃಷಿ ಬೆಲೆ ಆಯೋಗ, ಕರ್ನಾಟಕ ಸರ್ಕಾರ ಪ್ರಾಯೋಜಿತ ರೈತರ ಆದಾಯ ಮತ್ತು ಕಲ್ಯಾಣವೃದ್ಧಿ ಯೋಜನೆಯ ಆಯ್ದ ಗ್ರಾಮಗಳಾದ ಹುಲ್ಲುಕಟ್ಟೆ ಮತ್ತು ಕೊಪ್ಪ ಗ್ರಾಮಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಾಗಿ ಭರವಸೆ ನೀಡಿದ ಅಧಿಕಾರಿಗಳು, ಗ್ರಾಮ ಸಭೆಯಲ್ಲಿ ಯೋಜನೆಯ ಮುಂಚೂಣಿ ಪ್ರಾತ್ಯಕ್ಷಿಕೆಗೆ ಆಯ್ದ ರೈತರ ಮಣ್ಣು ಪರೀಕ್ಷೆಯ ಫಲಿತಾಂಶ ಚೀಟಿಗಳನ್ನು ಫಲಾನುಭವಿಗಳಿಗೆ ವಿತರಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ನಾಗಪ್ಪ ದೇಸಾಯಿ, ಡಾ.ಅನಿತಾ, ಡಾ.ಶಂಕರ್, ಡಾ. ಶಿವಪ್ಪನಾಯಕ್, ಯೋಜನೆಯ ಸಂಶೋಧನಾ ಸಹಾಯಕಿ ವೀಣಾ, ಕ್ಷೇತ್ರ ಸಹಾಯಕರಾದ ಕರಿಯಪ್ಪ ಹಾಗೂ ಹುಲ್ಲುಕಟ್ಟೆ ಮತ್ತು ಕೊಪ್ಪಾದ ರೈತ ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು.

Leave a Comment