ಕೃಷಿ ಪಂಪ್‍ಸೆಟ್‍ಗಳಿಗೆ ಸಮರ್ಪಕ ವಿದ್ಯುತ್ ನೀಡಲು ರೈತರ ಮನವಿ

ದಾವಣಗೆರೆ.ಫೆ.17; ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸರಿಯಾಗಿ ಪೂರೈಕೆ ಮಾಡದಿರುವುದು ಹಾಗೂ ತತ್ಕಾಲ್ ಯೋಜನೆಯಡಿ ಪರಿವರ್ತಕಗಳನ್ನು ಸರಿಯಾಗಿ ನೀಡದಿರುವ ಕ್ರಮ ಖಂಡಿಸಿ ಕೃಷಿ ಪಂಪ್‍ಸೆಟ್ ಬಳಕೆದಾರರ ಸಂಘದ ನೇತೃತ್ವದಲ್ಲಿ ರೈತರಿಂದು ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ದಾವಣಗೆರೆ ತಾಲೂಕಿನ ಕಬ್ಬೂರು, ಅಣಬೇರು, ಕಳವೂರು, ಮಲ್ಲೇನಹಳ್ಳಿ, ಶಂಕರನಹಳ್ಳಿ, ಮಾಯಕೊಂಡ, ವಿಠಲಾಪುರ ಗ್ರಾಮ ವ್ಯಾಪ್ತಿಯ ಕೃಷಿ ಪಂಪ್‍ಸೆಟ್‍ಗಳಿಗೆ ಕಳೆದು ಒಂಭತ್ತು ತಿಂಗಳಿಂದ ಸರಿಯಾದ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ರಾಜ್ಯ ಸರಕಾರ ಎಂಟು ಗಂಟೆ ನಿರಂತರ ವಿದ್ಯುತ್ ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸರಬರಾಜು ಮಾಡುವುದಾಗಿ ಹೇಳುತ್ತಿದ್ದರೂ, ಬೆಸ್ಕಾಂ ಇದನ್ನುಪಾಲನೆ ಮಾಡುತ್ತಿಲ್ಲ. ತೊಗಲೇರಿ ಮತ್ತು ಮಾಯಕೊಂಡ 66/11ಕೆವಿ ಎಂಯುಎಸ್‍ಎಸ್ ಉಪ ಕೇಂದ್ರಗಳಿಂದ 11 ಕೆವಿ ಮಾರ್ಗವೂ ಮೇಲಿನ ಗ್ರಾಮಗಳಿಗೆ ಪೂರೈಕೆಯಾಗುತ್ತಿರುವ ವಿದ್ಯುತ್ ವೋಲ್ಟೇಜ್ ಕಡಿಮೆ ಇದೆ. ಇದರಿಂದ ಪಂಪ್‍ಸೆಟ್‍ಗಳು ಸರಿಯಾಗಿ ಕಾರ್ಯನಿರ್ವಹಿಸದೆ ಸುಟ್ಟು ಹೋಗುತ್ತಿವೆ. ಒಂದು ಕಡೆ ಪಂಪ್‍ಸೆಟ್ ಮತ್ತೊಂದು ಕಡೆ ಬೇಸಿಗೆ ಬೆಳೆಗಳು ನಾಶವಾಗುತ್ತಿವೆ. ಪಂಪ್ ಸೆಟ್‍ಗಾಗಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿರುವ ರೈತರು ಈಗ ಆತ್ಮಹತ್ಯೆ ಮಾಡಿಕೊಳ್ಳುವ ದುಸ್ಥಿತಿ ತಲುಪಿದ್ದಾರೆ. ಕೂಡಲೆ ಗಮನ ಹರಿಸದಿದ್ದರೆ ಮುಂದಾಗುವ ಅನಾಹುತಗಳಿಗೆ ಬೆಸ್ಕಾಂ ಅಧಿಕಾರಿಗಳು, ಎಂಜಿನಿಯರ್‍ಗಳೇ ಕಾರಣವಾಗುತ್ತಾರೆಂದು ಎಚ್ಚರಿಕೆ ನೀಡಿದರು.

ರೈತರಿಗಾಗಿ ಸರಕಾರ ಮಾಡಿರುವ ತತ್ಕಾಲ್ ಯೋಜನೆಯಡಿ ಕೃಷಿ ಪಂಪ್‍ಸೆಟ್‍ಗಾಗಿ 25 ಕೆವಿ ಪರಿವರ್ತಕಗಳನ್ನು ಕೊಡುವುದಾಗಿ ಘೋಷಣೆ ಮಾಡಿದೆ. ಇದಕ್ಕಾಗಿ ರೈತರಿಂದ ಒಂದು ಪಂಪ್‍ಸೆಟ್‍ಗೆ 18,100 ರೂ ಪಡೆದು ಒಂಭತ್ತು ತಿಂಗಳಾಗಿದರೂ ಪರಿವರ್ತಕ ಈವರೆಗೂ ನೀಡಿಲ್ಲ.  . ಒಂದು ವಾರದೊಳಗೆ ಕೃಷಿ ಪಂಪ್‍ಸೆಟ್ ಬಳಕೆದಾರರ ಬೇಡಿಕೆ ಈಡೇರಿಸದಿದ್ದರೆ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ರೈತರು ಎಚ್ಚರಿಕೆ ನೀಡಿದರು.

Leave a Comment