ಕೃಷಿ-ತೋಟಗಾರಿಕಾ ಇಲಾಖೆ ವಿರುದ್ಧ ರೈತರ ಆಕ್ರೋಶ

 

ಮಂಗಳೂರು, ಜೂ.೨೦- ರೈತರ ಕಲ್ಯಾಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಆದರೆ, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಅರ್ಹ ರೈತರಿಗೆ ಯಾವುದೇ ಮಾಹಿತಿಯನ್ನು ಸಕಾಲಕ್ಕೆ ನೀಡದೆ ಯೋಜನೆಯಿಂದ ವಂಚಿತ ರನ್ನಾಗಿಸುತ್ತಿದ್ದಾರೆ ಎಂದು ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಉಭಯ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ರೈತ ಮುಖಂಡ ಧನಕೀರ್ತಿ ಬಲಿಪ ಮಾತನಾಡಿ, ಅಧಿಕಾರಿಗಳು ಸಭೆಯಲ್ಲಿ ವಿವಿಧ ಯೋಜನೆಗಳ ಕುರಿತು ಹೇಳುತ್ತಾರೆ. ಆದರೆ ತಾಲೂಕು-ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ನೀಡುವವರೇ ಇಲ್ಲ. ಗ್ರಾಮಮಟ್ಟದಲ್ಲೂ ಮಾಹಿತಿ ಸಿಗುತ್ತಿಲ್ಲ. ತಮಗೆ ಬೇಕಾದವರಿಗೆ ಮಾಹಿತಿ ರವಾನಿಸಿ ಸುಮ್ಮನಿರುತ್ತಾರೆ. ಇದರಿಂದ ಸಾವಿರಾರು ರೈತರು ಸರಕಾರದ ವಿವಿಧ ಯೋಜನೆಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಜಿಲ್ಲಾಮಟ್ಟದ ಅಧಿಕಾರಿಗಳು ತಾಲೂಕು ಮಟ್ಟದಲ್ಲಿ ರೈತರಿಗೆ ಮಾಹಿತಿ ನೀಡುವ ಸಭೆ ಆಯೋಜಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು ಮುಂದಿನ ತಿಂಗಳಿಂದ ತಾಲೂಕು ಮಟ್ಟದಲ್ಲಿ ರೈತರ ಸಭೆ ನಡೆಸಲಾಗುವುದು. ಅಲ್ಲದೆ ಭವಿಷ್ಯದಲ್ಲಿ ಅದನ್ನು ಹೋಬಳಿ, ಗ್ರಾಮಮಟ್ಟದಲ್ಲೂ ನಡೆಸುವ ಉದ್ದೇಶವಿದೆ ಎಂದರು. ಭತ್ತದ ಬೆಳೆಗೆ ಸಂಬಂಧಿಸಿ ರಾಜ್ಯ ಸರಕಾರ ಕಳೆದ ಬಜೆಟ್‌ನಲ್ಲಿ ಘೋಷಿಸಿದ ‘ಕರಾವಳಿ ಪ್ಯಾಕೇಜ್’ನ ಶೀಘ್ರ ಅನುಷ್ಠಾನಕ್ಕೂ ಕ್ರಮ ಜರಗಿಸಲಾಗುವುದು ಎಂದ ಸಚಿವ ಖಾದರ್, ಪ್ಯಾಕೇಜ್ ಪ್ರಕಾರ ಯಂತ್ರ ಹಾಗೂ ಕಾರ್ಮಿಕರನ್ನು ಬಳಸಿ ಭತ್ತ ಬೆಳೆಯುವ ರೈತರ ಖಾತೆಗೆ ಪ್ರತಿ ಹೆಕ್ಟೇರ್‌ಗೆ ೭,೫೦೦ ರೂ.ನೇರ ಜಮಾ ಮಾಡಲಾಗುವುದು. ಕರಾವಳಿಯ ಪ್ರಮುಖ ಬೆಳೆಯಾಗಿರುವ ಭತ್ತದ ಕಡೆಗೆ ಕೃಷಿಕರ ಆಸಕ್ತಿ ಕಡಿಮೆಯಾಗುತ್ತಿರುವುದರಿಂದ ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಪ್ಯಾಕೇಜ್ ಜಾರಿಗೊಳಿಸಲಾಗಿದೆ ಎಂದರು. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮಾತನಾಡಿ ಕೃಷಿ-ತೋಟಗಾರಿಕಾ ಇಲಾಖೆಯ ವಿವಿಧ ಮಾಹಿತಿ ನೇರವಾಗಿ ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿ ದೂರವಾಣಿ ಸಂಪರ್ಕ ಕೇಂದ್ರ ಸ್ಥಾಪಿಸಲಾಗುವುದು. ರೈತ ಸಂಘಟನೆಗಳ ನೆರವು ಪಡೆದು ಯಾವ ರೀತಿ ಅನುಷ್ಠಾನಗೊಳಿಸಬೇಕು ಎಂಬುದರ ಬಗ್ಗೆ ಚರ್ಚಿಸಲಾಗುವುದು ಎಂದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಸೀತಾ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಚ್.ಆರ್.ನಾಯ್ಕ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಪ್ರಸನ್ನ, ಸಹಕಾರಿ ಇಲಾಖೆಗಳ ಉಪನಿಬಂಧಕ ಸುರೇಶ್‌ಗೌಡ, ಪಾಲಿಕೆ ಉಪಾಯುಕ್ತೆ ಗಾಯತ್ರಿ ನಾಯಕ್, ವಿವಿಧ ರೈತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

 

ಕಳೆದ ಸಾಲಿನಲ್ಲಿ ಅಡಿಕೆ ಕೊಳೆ ರೋಗ ಪರಿಹಾರ ಸಿಗದ ರೈತರ ಪಟ್ಟಿಯನ್ನು ಹೆಸರು, ತಾಲೂಕು, ಗ್ರಾಮ, ಸರ್ವೇ ನಂಬರ್ ಸಹಿತ ನೀಡಿದರೆ ಯಾವ ಕಾರಣಕ್ಕೆ ವಿಳಂಬವಾಗಿದೆ ಎಂದು ಅಧಿಕಾರಿಗಳ ಮೂಲಕ ಪತ್ತೆಹಚ್ಚಿ ಮೂರು ದಿನದಲ್ಲಿ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ರೈತ ಸಂಘಟನೆಗಳ ಮುಖಂಡರಿಗೆ ಭರವಸೆ ನೀಡಿದರು. ಸುಳ್ಯ ತಾಲೂಕಿನ ವಿವಿಧ ಕಡೆ ಅಡಿಕೆ ಬೆಳೆಯದವರೂ ಕೂಡ ಕೊಳೆರೋಗದ ಪರಿಹಾರ ಧನ ಪಡೆದಿದ್ದಾರೆ. ಗ್ರಾಮಕರಣಿಕರು ಸ್ಥಳ ತನಿಖೆ ನಡೆಸದ ಕಾರಣ ಇಂತಹ ಎಡವಟ್ಟು ಆಗಿದೆ. ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ರೈತ ಮುಖಂಡರೊಬ್ಬರು ಒತ್ತಾಯಿಸಿದರು.

Leave a Comment