ಕೃಷಿ ಉತ್ಪನ್ನ ಮಾರಾಟ: ಮಧ್ಯವರ್ತಿಗಳ ವಂಚನೆ ಬಚಾವಿಗೆ  ಎಪಿಎಂಸಿ ಅವಲಂಬಿತ ರೈತರು: ದಾಖಲೆ ಶುಲ್ಕ ಸಂಗ್ರಹ

* ಡಿಸೆಂಬರ್ ಒಂದೇ ತಿಂಗಳಲ್ಲಿ 4.34 ಕೋಟಿ ರೂ. ಸಂಗ್ರಹ
ರಾಯಚೂರು.ಜ.06- ಡಿಸೆಂಬರ್ ಒಂದೇ ತಿಂಗಳಲ್ಲಿ ನಿಗದಿತ ಗುರಿಗಿಂತ ಒಂದುವರೆ ಪಟ್ಟು ಅಧಿಕ ಮಾರುಕಟ್ಟೆ ಶುಲ್ಕ ಸಂಗ್ರಹ ಎಪಿಎಂಸಿ ಇತಿಹಾಸದಲ್ಲಿಯೇ ಹೊಸ ದಾಖಲೆಯಾಗಿದೆ.
ಡಿಸೆಂಬರ್ ತಿಂಗಳಲ್ಲಿ ಶೇ.90 ರಿಂದ 95 ರಷ್ಟು ಮಾರುಕಟ್ಟೆ ಶುಲ್ಕ ಸಂಗ್ರಹ ಸಾಮಾನ್ಯವಾಗಿದ್ದರೂ, ಇದೇ ಪ್ರಪ್ರಥಮ ಬಾರಿಗೆ ಶೇ.100ಕ್ಕೆ 173 ರಷ್ಟು ಶುಲ್ಕ ಸಂಗ್ರಹ ಸರ್ಕಾರ ರಾಜೇಂದ್ರ ಗಂಜ್‌ನತ್ತ ನೋಡುವಂತೆ ಮಾಡಿದೆ. ನವೆಂಬರ್ ತಿಂಗಳಲ್ಲಿ ಶೇ.69 ರಷ್ಟು ಶುಲ್ಕ ಸಂಗ್ರಹವಾಗಿದ್ದರೆ, ಡಿಸೆಂಬರ್ ತಿಂಗಳಲ್ಲಿ ಶುಲ್ಕ ಸಂಗ್ರಹ ಎಪಿಎಂಸಿ ಇತಿಹಾಸದಲ್ಲಿಯೇ ಸುವರ್ಣ ಅಕ್ಷರದ ದಾಖಲೆಯಾಗಿದೆ.

ಕೇಂದ್ರ ಸರ್ಕಾರದ 500, 1000 ನೋಟು ಅಮಾನ್ಯ ಶುಲ್ಕ ಸಂಗ್ರಹ ಹೆಚ್ಚಳಕ್ಕೆ ಕಾರಣವಾಗಿರಬಹುದೆಂಬ ಅಂದಾಜು ಮಾಡಲಾಗಿತ್ತು. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎಪಿಎಂಸಿಗೆ ಭಾರೀ ಪ್ರಮಾಣದಲ್ಲಿ ಭತ್ತ ಮತ್ತು ಹತ್ತಿ ಮಾರಾಟಕ್ಕೆ ಬಂದಿರುವುದು ನೋಟು ಅಮಾನ್ಯಕ್ಕಿಂತ ವ್ಯಾಪಾರ ಭದ್ರತೆ ಶುಲ್ಕ ಸಂಗ್ರಹ ಹೆಚ್ಚಳಕ್ಕೆ ಕಾರಣ ಎನ್ನುವುದು ಸ್ಪಷ್ಟಗೊಳಿಸಿದೆ.

ಭತ್ತ ಮತ್ತು ಹತ್ತಿ ವ್ಯಾಪಾರಿ ಮಧ್ಯವರ್ತಿಗಳ ವಂಚನೆ ಪ್ರಕರಣ ಹೆಚ್ಚಳದಿಂದ ತೀವ್ರ ನಷ್ಟಕ್ಕೆ ಗುರಿಯಾದ ರೈತರು ನೇರ ವ್ಯಾಪಾರಕ್ಕೆ ವಿದಾಯ ಹೇಳಿ, ಎಪಿಎಂಸಿ ಮೂಲಕವೇ ವ್ಯವಹಾರ ನಡೆಸಲು ಮುಂದಾಗಿರುವುದು ಡಿಸೆಂಬರ್ ಒಂದೇ ತಿಂಗಳಲ್ಲಿ 4.34 ಕೋಟಿ ಶುಲ್ಕ ಜಿಗಿತಕ್ಕೆ ಕಾರಣವಾಗಿದೆ. ಶೇ.10 ರಿಂದ 20 ರಷ್ಟು ನೋಟು ಅಮಾನ್ಯ ಪ್ರಭಾವವಿದ್ದರೂ, ಶೇ.80 ರಷ್ಟು ವ್ಯಾಪಾರಸ್ಥರ ವಂಚನೆಯಿಂದ ಬಚಾವ್ ಆಗಲು ರೈತರು ಎಪಿಎಂಸಿಯನ್ನೇ ಅವಲಂಬಿಸಿರುವುದು ಭಾರೀ ಪ್ರಮಾಣದ ಶುಲ್ಕ ಸಂಗ್ರಹಕ್ಕೆ ಕಾರಣವಾಗಿದೆ.

2015 ನವೆಂಬರ್ ತಿಂಗಳಲ್ಲಿ ಸರ್ಕಾರ 1.50 ಕೋಟಿ ಶುಲ್ಕ ಸಂಗ್ರಹಕ್ಕೆ ಗುರಿ ನೀಡಿತ್ತು. ಆದರೆ, 66.97 ಲಕ್ಷ (ಶೇ.44.50) ಶುಲ್ಕ ಸಂಗ್ರಹವಾಗಿತ್ತು. 2015 ಡಿಸೆಂಬರ್ ತಿಂಗಳಲ್ಲಿ ಸರ್ಕಾರದ ಗುರಿ 2.65 ಕೋಟಿ ನಿಗದಿಪಡಿಸಲಾಗಿತ್ತು. 2.51 ಕೋಟಿ (ಶೇ.94.75) ಶುಲ್ಕ ಸಂಗ್ರಹವಾಗಿತ್ತು. ಆದರೆ, 2016 ನವೆಂಬರ್ ತಿಂಗಳಲ್ಲಿ 1.50 ಕೋಟಿ ಗುರಿ ನಿಗದಿಪಡಿಸಲಾಗಿತ್ತು. ಆದರೆ, 1.04 ಕೋಟಿ (ಶೇ.69.36 ಕೋಟಿ) ಶುಲ್ಕ ಸಂಗ್ರಹವಾಗಿದೆ. ಡಿಸೆಂಬರ್ 2016 ರಲ್ಲಿ ಒಟ್ಟು 2.50 ಕೋಟಿ ರೂ. ಶುಲ್ಕ ಸಂಗ್ರಹಕ್ಕೆ ಗುರಿ ನಿಗದಿಪಡಿಸಲಾಗಿತ್ತು. ಆದರೆ, 4.34 ಕೋಟಿ (ಶೇ.173.7) ಶುಲ್ಕ ಸಂಗ್ರಹ ಸರ್ಕಾರ ನಿಬ್ಬೆರಗಾಗುವಂತೆ ಮಾಡಿದೆ.
ಜಿಲ್ಲೆಯ 3 ಲಕ್ಷ ಹೆಕ್ಟರ್ ಪ್ರದೇಶದ ರೈತರು ಶೇ.50 ರಷ್ಟು ಕೃಷಿ ಉತ್ಪನ್ನವನ್ನು ಮಧ್ಯವರ್ತಿಗಳ ಮೂಲಕ ಮಾರಾಟ ಮಾಡುತ್ತಿದ್ದರು ಎನ್ನುವ ಸತ್ಯ ಈಗ ಬಹಿರಂಗಗೊಂಡಿದೆ. ಮೇಲಿಂದ ಮೇಲೆ ಮಧ್ಯವರ್ತಿಗಳ ವಂಚನೆಯಿಂದ ಬೇಸತ್ತ ರೈತರು ತಮ್ಮ ಕೃಷಿ ಉತ್ಪನ್ನ ಮಾರಾಟ ಭದ್ರತೆ ಹಿನ್ನೆಲೆಯಲ್ಲಿ ಎಪಿಎಂಸಿಯನ್ನೇ ಅವಲಂಬಿಸಿದ ಕಾರಣ ಇತಿಹಾಸದಲ್ಲಿ ಕಂಡರಿಯದಷ್ಟು ಶುಲ್ಕ ಒಂದೇ ತಿಂಗಳಲ್ಲಿ ಸಂಗ್ರಹವಾಗಿರುವುದು ಎನ್ನುವುದು ಅಧಿಕಾರಿಗಳ ಹೇಳಿಕೆಯಾಗಿದೆ.

Leave a Comment