ಕೃಷಿಯಲ್ಲಿ ವಿಜ್ಞಾನ, ತಾಂತ್ರಿಕತೆ ಬಳಕೆಗೆ ಕರೆ

ಬೆಂಗಳೂರು, ಮೇ ೧೭- ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮುಂದಿನ ದಶಕಗಳಲ್ಲಿ ದೇಶದ ಆಹಾರ ಉತ್ಪಾದನೆ ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ. ಆದ್ದರಿಂದ ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆ ಕ್ಷೇತ್ರಗಳಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕತೆಯ ಬಳಕೆ ಇನ್ನಷ್ಟು ಹೆಚ್ಚಾಗಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಹೆಚ್. ಶಿವಣ್ಣ ಹೇಳಿದ್ದಾರೆ.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳ ವೇದಿಕೆ ವತಿಯಿಂದ ನಗರದಲ್ಲಿಂದು ಏರ್ಪಡಿಸಿದ್ದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಹಾರ ಉತ್ಪಾದನೆಯಲ್ಲಿ ಇನ್ನಷ್ಟು ಸುಧಾರಣೆ ಅಗತ್ಯವಿದೆ. ವರ್ಷ ಕಳೆದಂತೆ, ಕೃಷಿ ಭೂಮಿ ಪ್ರಮಾಣ ಇಳಿಕೆಯಾಗುತ್ತಿದ್ದು, ಇದರಿಂದ ಆಹಾರ ಉತ್ಪಾದನೆಯೂ ಕುಂಠಿತಗೊಳ್ಳುತ್ತಿದೆ. ಆದರೆ ಮತ್ತೊಂದೆ‌‌‌ಡೆ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದೇ ರೀತಿ ಮುಂದುವರೆದರೆ ಮುಂದಿನ ಕೆಲವು ದಶಕಗಳಲ್ಲಿ ಆಹಾರ ಕಡಿಮೆಯಾಗಿ ದೇಶದಲ್ಲಿ ಆಹಾರಕ್ಕಾಗಿ ಹಾಹಾಕಾರ ಉಂಟಾಗುವ ಸಂಭವವಿದೆ ಎಂದು ಎಚ್ಚರಿಕೆ ನೀಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ನೂರು ಮಿಲಿಯನ್ ಹೆಕ್ಟೇರ್ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ನಡೆಸಲಾಗುತ್ತಿತ್ತು. ಆದರೆ ಈಗ 26 ಮಿಲಿಯನ್ ಹೆಕ್ಟೇರ್ ಪ್ರದೇಶ ಕೃಷಿಯಿಂದ ಹೊರತಾಗಿದೆ. ನಗರೀಕರಣ ಮತ್ತು ಇತರ ಚಟುವಟಿಕೆಗಳಿಗಾಗಿ ಈ ಭೂಮಿಯನ್ನು ಬಳಸಲಾಗಿದೆ.

ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದ ಜಾನುವಾರುಗಳ ಸಂಖ್ಯೆಯೂ ಇಳಿಮುಖವಾಗಿದೆ. ಆದ್ದರಿಂದ ಈ ಎಲ್ಲಾ ಕ್ಷೇತ್ರಗಳಲ್ಲಿ ವೈಜ್ಞಾನಿಕ ಸಂಶೋಧನೆ ನಡೆಯಬೇಕು ಹಾಗೂ ಹೊಸ ಅನ್ವೇಷಣೆಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಕಲ್ಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಆರ್. ಶೆಟ್ಟಿ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ಹೆಚ್ಚಳಕ್ಕೆ ವೇದಿಕೆ ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಶಿಕ್ಷಣ ಇಲಾಖೆ, ವಿದ್ಯಾಲಯದ ಕುಲಪತಿಗಳು ಹಾಗೂ ಶಿಕ್ಷಣ ತಜ್ಞರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹಲವು ಶಿಫಾರಸುಗಳನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ. ವಿಶೇಷವಾಗಿ ಮೈಸೂರು ಮುಕ್ತ ವಿಶ್ವವಿದ್ಯಾಲಯದ ಸಮಸ್ಯೆಯನ್ನು ಬಗೆಹರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಎನ್.ಆರ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿ.ಎಂ. ಬೆಳೆಗಳು, ಸವಾಲುಗಳು ಮತ್ತು ಅವಕಾಶಗಳು, ವೈಜ್ಞಾನಿಕ ಕೃಷಿ ಲೇಖನಗಳ ಸಂಕಲನ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.  ವೇದಿಕೆಯಲ್ಲಿ ಕುಲಪತಿಗಳಾದ ಪ್ರೊ.ಡಿ.ಪಿ. ಬಿರಾದಾರ್, ಡಾ.ಸಿ. ವಾಸುದೇವಪ್ಪ. ಪ್ರೊ. ಹೆಚ್. ಶಿವಣ್ಣ, ಪ್ರೊ.ಆರ್. ದ್ವಾರಕಿನಾಥ್, ಡಾ. ಎಂ. ಮಹದೇವಪ್ಪ, ಎಂ.ಕೆ. ಐಯ್ಯಪ್ಪ, ಮತ್ತಿತರರು ಪಾಲ್ಗೊಂಡಿದ್ದರು.

Leave a Comment