ಕೃಷಿಪರಿಕರ ಮಾರಾಟ ಮಳಿಗೆಗಳ ತಪಾಸಣೆ

ದಾವಣಗೆರೆ.ಆ.25;  ಬೆಂಗಳೂರಿನ ಕೃಷಿ ಆಯುಕ್ತಾಲಯದ ಅಪರ ಕೃಷಿ ನಿರ್ದೇಶಕರಾದ ಎಂ. ಎಸ್. ದಿವಾಕರ್ ಹಾಗೂ ದಾವಣಗೆರೆ ಜಂಟಿ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಕೃಷಿ ಪರಿಕರ ಮಾರಾಟ ಮಳಿಗೆಗಳ ತಪಾಸಣೆ ಕಾರ್ಯಕೈಗೊಳ್ಳಲಾಗಿತ್ತು. ದಾವಣಗೆರೆ, ಹೊನ್ನಾಳಿ, ಚನ್ನಗಿರಿ, ಹರಿಹರ ಮತ್ತು ಜಗಳೂರು ತಾಲ್ಲೂಕಿನಾದ್ಯಂತ ಏಕಕಾಲಕ್ಕೆ ಕೃಷಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಜೈವಿಕ ಉತ್ಪನ್ನಗಳ ಹೆಸರಿನಲ್ಲಿ ದಾಸ್ತನಿರಿಸಿ ಮಾರಾಟ ಮಾಡುತ್ತಿದ್ದ ಜೈವಿಕ ಪೀಡೆನಾಶಕಗಳು, ಸಸ್ಯ ವರ್ಧಕಗಳು, ಹಾರ್ಮೋನ್‍ಗಳು ಎಂಬ ವಿವಿಧ ಹೆಸರಿನ ಉತ್ಪನನ್ನಗಳನ್ನು ಪರಿಶೀಲಿಸಿ ಮಾದರಿ ಸಂಗ್ರಹಿಸಿದರು.  ಪ್ರಿನ್ಸಿಪಲ್ ಸರ್ಟಿಫಿಕೇಟ್ ಪರವಾನಿಗೆಯಲ್ಲಿ ನಮೂದಿಸದಿರುವ ಉತ್ಪನ್ನಗಳು, ಇನ್‍ವಾಯ್ಸ್ ಇಲ್ಲದೆ ದಾಸ್ತನಿರಿಸಿದ ಉತ್ಪನ್ನಗಳಿಗೆ ಮಾರಾಟ ತಡೆ ಆಜ್ಞೆ ನೀಡಲಾಯಿತು. ಎಲ್ಲಾ ವಿಧದ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಕೃಷಿ ಪರಿಕರಣೆಗಳ ಅಧಿಕೃತ ಪರವಾನಿಗೆ ಇಲ್ಲದೆ, ಇನ್‍ವಾಯ್ಸ್ ಇಲ್ಲದೆ ದಾಸ್ತಾನು ಅಥವಾ ಮಾರಾಟ ಮಾಡಿದ್ದಲ್ಲಿ ಮಾರಟಗಾರರ ಪರವನಾಗಿ ರದ್ದು ಪಡಿಸಲಾಗುವುದೆಂಬ ಎಚ್ಚರಿಕೆ ನೀಡಲಾಯಿತು. ನಗರದಲ್ಲಿ ಅಧಿಕಾರಿಗಳ ತಂಡ ಎನ್. ಆರ್ ರಸ್ತೆ, ಕೆ. ಆರ್ ರಸ್ತೆ, ಜಗಳೂರು ಬಸ್ ನಿಲ್ದಾಣ ಮುಂತಾದ ಕಡೆಯಿರುವ ಮಾರಾಟ ಮಳಿಗೆಗಳಲ್ಲಿ ತಪಾಸಣೆ ಮಾಡಿದರು. ಈ ವೇಳೆ ದಾವಣಗೆರೆ ಮತ್ತು ಹೊನ್ನಾಳಿ ಉಪವಿಭಾಗದ ಉಪ ಕೃಷಿ ನಿರ್ದೇಶಕರು,  ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯದ ಉಪ ಕೃಷಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು ಜಾರಿದಳ, ಎಲ್ಲಾ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಕೃಷಿ ಅಧಿಕಾರಿಗಳನ್ನೊಳಗೊಂಡ ನಲವತ್ತು ಜನರ ತಂಡ ಈ ವಿಶೇಷ ತಪಾಸಣಾ ಕಾರ್ಯದಲ್ಲಿ ಭಾಗವಹಿಸಿದ್ದರು.

Leave a Comment