ಕೂಡಿ ಬಾಳಿದರೆ ಬದುಕು ಬಂಗಾರ: ಕವಿತಾಕೃಷ್ಣ

ತುಮಕೂರು, ಫೆ. ೧೧- ಅವಿಭಕ್ತ ಕುಟುಂಬದ ತವನಿಧಿಯಾಗಿದ್ದ ಭಾರತ ನವ ನಾಗರಿಕತೆಗೆ ಮನಸೋತು ಪುಟ್ಟ ಸಂಸಾರಕ್ಕೆ ಶರಣಾಗಿದೆ. ಇದರಿಂದ ಪ್ರೀತಿ, ವಾತ್ಸಲ್ಯ, ಕರುಣೆ, ಅನುಕಂಪ, ಭಾವೈಕ್ಯತೆ ಇಲ್ಲದೆ ಏಕಾಂಗಿತನದಿಂದ ಸೋರುವಂತಾಗಿದ್ದು, ಕೂಡಿ ಬಾಳಿದರೆ ಬದುಕು ಬಂಗಾರವಾಗುತ್ತದೆ ಎಂದು ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಗೂಳೂರು ಹೋಬಳಿಯ ಕೌತುಮಾರನಹಳ್ಳಿಯಲ್ಲಿರುವ ಆಕಾಶ್ ಕೃಷ್ಣ ಫಾರಂನಲ್ಲಿ ಆಯೋಜಿಸಿದ್ದ ಬಾಂಧವ್ಯ ಬಳಗದ ಸಮ್ಮಿಲನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅವಿಭಕ್ತ ಕುಟುಂಬ ಜೇನುಗೂಡಿನಂತೆ, ಕೂಡಿ ಬಾಳುವ, ಕೂಡಿ ದುಡಿಯುವ, ಕೂಡಿ ಉಣ್ಣುವ ಮನೋಧರ್ಮದ ಬದುಕು ವಿಶ್ವಕ್ಕೆ ಮಾದರಿಯಾಗಿತ್ತು. ಒಂದು ಸಂಸಾರವೆಂದರೆ 40 ಮಂದಿಯಾದರೂ ಇರುತ್ತಿದ್ದರು. ಕವಿವಾಣಿಯಂತೆ ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ ಎಂದು ತಿಳಿದು ಬಾಳುತ್ತಿದ್ದರು. ಆಗ ಮಾನವೀಯತೆ ಮನೆಗಳಲ್ಲಿ ತುಂಬಿ ತುಳುಕುತ್ತಿತ್ತು. ಆನಂದದ ಒರತೆಯಾಗಿ ಜನ ಸುಖೀ ಸಂಸಾರ ನಡೆಸುತ್ತಿದ್ದರು ಎಂದರು.

ಬಾಂಧವ್ಯ ಬಳಗವು ಒಂದೇ ಕುಟುಂಬದ ಚದುರಿದ ಸದಸ್ಯರನ್ನು ಕೂಡಿ ಹಾಕಿ 4ನೇ ಸಮ್ಮಿಲನ ಕಾರ್ಯಕ್ರಮ ನಡೆಸುತ್ತಿರುವುದು ಅಭಿನಂದನೀಯ. ಹಿರಿಯರು, ಕಿರಿಯರು, ವಯಸ್ಕರು ಒಟ್ಟು 80 ಮಂದಿ ಕೂಡಿ ನಗರ ಜೀವನ ಮರೆತು ಹಳ್ಳಿಗಾಡಿನ ಸೊಗಡಿಗೆ ಮಾರು ಹೋಗಿರುವುದು ಪ್ರಶಂಸನಾರ್ಹ ಸಂಗತಿ ಎಂದು ಶ್ಲಾಘಿಸಿದರು.

ಎರಡು ದಿನಗಳ ಕಾಲದ ಸಮ್ಮಿಲನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಚಾರ ಸಂಕಿರಣ, ಕ್ರೀಡೆ, ಕಲೆ, ಚಿಂತನ ಮಂಥನಗಳು ಜರುಗಿದವು. ಈ ಸಂದರ್ಭದಲ್ಲಿ ಕುಟುಂಬದ ಹಿರಿಯ ನಾಗರಿಕರಾದ ಸಿ.ಎಸ್. ಶಾಮಣ್ಣ, ಸಿ.ಎಸ್. ನಾಗರತ್ನ, ಚಿಟ್ಟನಹಳ್ಳಿ ಗೋವಿಂದರಾಜು, ಸಿ.ವಿ. ಕುಮುದ್ವತಿ, ಪ್ರೇಮ ಬಂಗಾರು ಮತ್ತು ರತ್ನಕೃಷ್ಣ ಅವರನ್ನು ಅರವಿಂದ ಕೃಷ್ಣ, ಶರತ್‍ಬಾಬು, ಎ.ಎನ್. ಮಾರುತಿ, ಪೂರ್ಣಿಮಾ ಪ್ರಕಾಶ್, ಎ.ಎನ್. ವಾಸುದೇವ್ ದಂಪತಿಗಳು ಸನ್ಮಾನಿಸಿದರು.

ಪುಸ್ತಕ ಬಿಡುಗಡೆ
ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣರ ವಾಲ್ಮೀಕಿ ವಚನ ರಾಮಾಯಣದ 12ನೇಯ ಅವತರಣಿಕೆಯನ್ನು ಎಂ.ಎಲ್. ಭಾನುಪ್ರಕಾಶ್ ಬಿಡುಗಡೆ ಮಾಡಿ, ಮಾತನಾಡಿದ ಅವರು, ನಾಡಿನ ಖ್ಯಾತ ಸಾಹಿತಿಗಳಾದ ಕವಿತಾಕೃಷ್ಣರು ನಮ್ಮ ಕುಟುಂದ ಏಕಮೇವ ಕವಿಗಳು. ವೈವಿಧ್ಯಮಯವಾದ 187 ಕೃತಿಗಳನ್ನು ನಾಡಿಗೆ ಕೀರ್ತಿ ತಂದಿದ್ದಾರೆ. ಇಂತಹ ಹಿರಿಯ ಕವಿಗಳ ಕೃತಿ ರಾಮಾಯಣವನ್ನು ಲೋಕಾರ್ಪಣೆ ಮಾಡುವ ಭಾಗ್ಯ ಕಿರಿಯನಾದ ನನಗೆ ದೊರೆತಿದ್ದು, ಅತೀವ ಆನಂದ ತಂದಿದೆ. ಅವರ ಸಹಕಾರದಲ್ಲಿ ನಮ್ಮ ಮೂಲ ಕುಟುಂಬ ಇಲ್ಲಿ ಕೂಡುವಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎಲ್.ಎನ್. ಮುನಿರಾಜು, ತೇಜಸ್ ಕೃಷ್ಣ, ರಾಮಚಂದ್ರ, ಸುಮ, ಗಾಯತ್ರಿ, ನಾಗಭೂಷಣ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಾಲಿನ ಪದ್ಮನಾಭ ಪ್ರಾರ್ಥಿಸಿದರು. ಅರವಿಂದಕೃಷ್ಣ ಸ್ವಾಗತಿಸಿದರು. ಮಂಜುಳಾ ಸಿ.ಜಿ ವಂದಿಸಿದರು. ಪೂರ್ಣಿಮಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

Leave a Comment