ಕೂಡಾ ಅಧ್ಯಕ್ಷ ಸ್ಥಾನ : ಮಹಿಳೆಯರಿಗೆ ಆದ್ಯತೆ ನೀಡಿ

ಕಲಬುರಗಿ,ಫೆ.19-ಕೆಲ ತಿಂಗಳಿಂದ ಖಾಲಿ ಇರುವ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕೂಡಾ)ದ ಅಧ್ಯಕ್ಷ ಸ್ಥಾನ ಯಾರಿಗೆ ದಕ್ಕಲಿದೆ ಎಂಬ ಬಿಸಿಬಿಸಿ ಚರ್ಚೆ ಬಿಜೆಪಿ ವಲಯದಲ್ಲಿ ನಡೆಯುತ್ತಿದ್ದು, ಈ ಬಾರಿ ಮಹಿಳೆಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಒತ್ತಾಯವು ಕೇಳಿ ಬರುತ್ತಿದೆ.

ಸದ್ಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪ್ರಮುಖರಾದ ದಯಾಘನ್ ಧಾರವಾಡಕರ್, ಉಮೇಶ ಪಾಟೀಲ, ರಾಘವೇಂದ್ರ ಕುಲಕರ್ಣಿ ಕೋಗನೂರ, ಮಹಿಳಾ ಘಟಕದಿಂದ ಸಾವಿತ್ರಿ ಕುಳಗೇರಿ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದ್ದು, ಈ ಬಾರಿ ಮಹಿಳೆಯರಿಗೆ ಅಧ್ಯಕ್ಷಸ್ಥಾನ ನೀಡಬೇಕು ಎಂಬ ಒತ್ತಾಯ ಹೆಚ್ಚಾಗಿದೆ.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ರಚನೆಯಾದಾಗಿನಿಂದ ಇದುವರೆಗೆ ಮಹಿಳೆಯರನ್ನು ಅಧ್ಯಕ್ಷರನ್ನಾಗಿ ಮಾಡಿಲ್ಲ. ಈ ಬಾರಿಯಾದರೂ ಮಹಿಳೆಯರಿಗೆ ಅಧ್ಯಕ್ಷಸ್ಥಾನ ನೀಡುವುದರ ಮೂಲಕ ಮಹಿಳೆಯರಿಗೆ ಆದ್ಯತೆ ನೀಡಬೇಕು. ಕೆಡಿಎ ಅಧ್ಯಕ್ಷಸ್ಥಾನ ಮಹಿಳೆಯರಿಗೆ ನೀಡಿದರೆ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ. ಇದರಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಇತರ ಮಹಿಳೆಯರಲ್ಲಿ ಆಶಾಭಾವನೆ ಮೂಡುತ್ತದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಸಾವಿತ್ರಿ ಕುಳಗೇರಿ ಮನವಿ

ಕಳೆದ 26 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಪಕ್ಷದ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿಯಾಗಿ, ಕಾರ್ಯಕಾರಿಣಿ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಸೇವೆಯನ್ನು ಪರಿಗಣಿಸಿ ಕೆಡಿಎ ಅಧ್ಯಕ್ಷಸ್ಥಾನ ನೀಡುವಂತೆ ಪಕ್ಷದ ಪ್ರಮುಖರಲ್ಲಿ ಮನವಿ ಮಾಡಿದ್ದೇನೆ ಎಂದು ಬಿಜೆಪಿ ಮಹಿಳಾ ಘಟಕದ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ಸಾವಿತ್ರಿ ಕುಳಗೇರಿ ತಿಳಿಸಿದರು.

ಈಗಾಗಲೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ ಜೀ, ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ, ಸಂಸದೆ ಶೋಭಾ ಕರಂದ್ಲಾಜೆ, ಮುಖಂಡರಾದ ಅರವಿಂದ ಲಿಂಬಾವಳಿ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಅವರನ್ನು ಭೇಟಿಯಾಗಿ ಕೆಡಿಎ ಅಧ್ಯಕ್ಷಸ್ಥಾನ ನೀಡುವಂತೆ ಮನವಿ ಮಾಡಿದ್ದೇನೆ. ಮಹಿಳೆಯರಿಗೆ ಆದ್ಯತೆ ನೀಡಿದರೆ ಪಕ್ಷಕ್ಕಾಗಿ ದುಡಿಯುತ್ತಿರುವ ಮಹಿಳೆಯರಲ್ಲಿ ಆಶಾ ಭಾವನೆ ಮೂಡಲಿದೆ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ತಿಳಿಸಿದರು.

ಇಂದು ಸಾಯಂಕಾಲ ನಗರದಲ್ಲಿ ನಡೆಯಲಿರುವ ಬಿಜೆಪಿ ಜಿಲ್ಲಾ ಅಧ್ಯಕ್ಷರುಗಳ ಪದಗ್ರಹಣ ಸಮಾರಂಭಕ್ಕೆ ಆಗಮಿಸುತ್ತಿರುವ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಅವರನ್ನು ಮತ್ತೊಮ್ಮೆ ಭೇಟಿಯಾಗಿ ಕೆಡಿಎ ಅಧ್ಯಕ್ಷಸ್ಥಾನ ನೀಡುವಂತೆ ಮನವಿ ಮಾಡುವುದಾಗಿ ಅವರು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಪ್ರಮುಖರು ಮತ್ತು  ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮತ್ತು ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಅವರು ಈ ಬಾರಿ ಕೆಡಿಎ ಅಧ್ಯಕ್ಷಸ್ಥಾನ ಯಾರಿಗೆ ನೀಡುವರು ಎಂಬುವುದು ಮಾತ್ರ ತೀವ್ರ ಕುತೂಹಲ ಕೆರಳಿಸಿದ್ದು, ಈ ಬಾರಿ ಮಹಿಳೆಯರಿಗೆ ಆದ್ಯತೆ ನೀಡುವರೆ ಎಂಬುವುದನ್ನು ಕಾದು ನೋಡಬೇಕಾಗಿದೆ.

 

 

 

Leave a Comment