ಕುಸುಮ ರೋಗ ಪೀಡಿತರಿಗೆ ಔಷಧಿ ಪೂರೈಕೆಗೆ ಆಗ್ರಹ

ಬಳ್ಳಾರಿ, ಮಾ.20:ರಾಜ್ಯ ಸರ್ಕಾರವು ಕುಸುಮ ರೋಗ ಪೀಡಿತರಿಗೆ ಚಿಕಿತ್ಸೆಯ ಔಷಧಿಯನ್ನು ಉಚಿತವಾಗಿ ಒದಗಿಸಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಇದಕ್ಕಾಗಿ ಪ್ರತ್ಯೇಕ ಚಿಕಿತ್ಸಾ ವಿಭಾಗ ಸ್ಥಾಪಿಸಬೇಕು ಎಂದು ಕುಸುಮ ರೋಗ ಪೀಡಿತ ರೋಗಿಗಳ ಹಾಗೂ ಪೋಷಕರ ಒಕ್ಕೂಟವು ಆಗ್ರಹಿಸಿದೆ.

ಒಕ್ಕೂಟದ ಧುರೀಣರು, ಸದಸ್ಯರು ಇಂದು ಜಿಲ್ಲಾಧಿಕಾರಿಗಳ ಕಛೇರಿಯು ಸಂಕೇತಿಕವಾಗಿ ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಿ, 2017-18ನೇ ಸಾಲಿನ ಆಯವ್ಯಯ ಮುಂಗಡ ಪತ್ರದಲ್ಲಿ ಮುಖ್ಯಮಂತ್ರಿಗಳು ಯಾವುದೇ ವಿಧದ ಅನುದಾನವನ್ನು ನಿಗದಿಪಡಿಸದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಇನ್ನಾದರೂ ಈ ರೋಗಿಗಳ ನೆರವಿಗೆ ಮುಂದಾಗಲು ಹೆಚ್ಚಿನ ಹಣ ನೀಡುವಂತೆ, ಕುಸುಮ ರೋಗ ಪೀಡಿತರಿಗೆ ಫ್ಯಾಕ್ಟ್ರ 8 ಮತ್ತು 9 ಔಷಧಿಗಳು ಉಚಿತವಾಗಿ ಒದಗಿಸುವಂತೆ ಕೋರಿದ್ದಾರೆ.

ಕುಸುಮ ರೋಗ ಪೀಡಿತ ಜನರಿಗೆ (ರೋಗಿಗಳಿಗೆ) ಮಾರುಕಟ್ಟೆಯಲ್ಲಿ ಔಷಧಿಯು ತುಂಬಾ ದುಬಾರಿಯಾಗಿರುತ್ತದೆ. ಈ ಔಷಧಿಯನ್ನು ಮಾರ್ಕೆಟ್ ಬೆಲೆಯಲ್ಲಿ ಖರೀದಿಸಿ, ಬದುಕುವ ಆರ್ಥಿಕ ಬಲವಿಲ್ಲದ ಬಡವರಾಗಿರುವುದರಿಂದ ಕೂಡಲೇ ಇವರ ನೆರವಿಗಾಗಿ ಹಣ ಬಿಡುಗಡೆ ಮಾಡಬೇಕು, ಔಷಧಿಯನ್ನು ಸಾಕಷ್ಟು ಪ್ರಮಾಣದಲ್ಲಿ ಪೂರೈಸಬೇಕು ಎಂದು ಒತ್ತಾಯಿಸಲಾಗಿದೆ.

ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಈ ರೋಗಿಗಳಿಗೆ ಚಿಕಿತ್ಸೆಗಾಗಿ ಪ್ರತ್ಯೇಕವಾಗಿ ವಿಭಾಗ ಸ್ಥಾಪಿಸಬೇಕು, ಈ ಸದ್ಯ ಈ ಚಿಕಿತ್ಸಾ ಸೌಲಭ್ಯ ದೂರದ ದಾವಣಗೆರೆಯಲ್ಲಿ ಇದ್ದು ಅಲ್ಲಿಗೆ ಹೋಗುವುದರೊಳಗಡೆ, ದೇಹದಲ್ಲಿನ ರಕ್ತವೆಲ್ಲಾ ಖಾಲಿಯಾಗುತ್ತ ಬದುಕಿ ಉಳಿಯುವುದೂ ಕಷ್ಟವಾಗುತ್ತಿದೆ, ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿ ಔಷಧಿ ಒದಗಿಸುವ ಮತ್ತು ಇದಕ್ಕಾಗಿ ಪ್ರತ್ಯೇಕ ವಿಭಾಗ ತೆರೆದರೆ ಅನುಕೂಲವಾಗುತ್ತದೆ ಎಂದು ತಿಳಿಸಲಾಗಿದೆ.

ಫ್ಯಾಕ್ಟ್ರ 8 ಮತ್ತು 9 ಔಷಧಿಯನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸಲು ಸರ್ಕಾರ ಈ ಬಜೆಟ್ ನಲ್ಲಿ ಹೆಚ್ಚಿನ ಹಣವನ್ನು ಮೀಸಲಿಡಬೇಕು, ಬಳ್ಳಾರಿ ಜಿಲ್ಲೆಯಲ್ಲಿ ಫ್ಯಾಕ್ಟ್ರ 7 ರೋಗ ಬಾಧಿತರು ಇರುವುದಿಲ್ಲ. ಆದರೂ ಸಹ, ಕಳೆದ ವರ್ಷದ ಬಜೆಟ್ ನಲ್ಲಿ ಫ್ಯಾಕ್ಟ್ರ-7 ಔಷಧಗಳನ್ನು ಕಳುಹಿಸಲಾಗಿದೆ ಇದರಿಂದ ಜಿಲ್ಲೆಯಲ್ಲಿ ಯಾವುದೇ ರೋಗಿಗಳಿಗೂ ಉಪಯೋಗವಾಗಿಲ್ಲ ಎಂದು ತಿಳಿಸಿದ್ದಾರೆ.

ಆದುದರಿಂದ ಮುಖ್ಯಮಂತ್ರಿ ಹಾಗೂ ಜಿಲ್ಲಾ ಸಚಿವರು, ಈ ಬಗ್ಗೆ ಗಮನ ಹರಿಸಿ ಔಷಧಿ ಸರಬರಾಜು ಮಾಡುವಂತೆ, ಜಿಲ್ಲಾ ಕೇಂದ್ರದಲ್ಲಿ ಪ್ರತ್ಯೇಕ ಚಿಕಿತ್ಸಾ ವಿಭಾಗ ತೆರೆಯುವಂತೆ ನೋಡಿಕೊಳ್ಳುವಂತೆ ಮನವಿ ಪತ್ರದಲ್ಲಿ ವಿವರಿಸಲಾಗಿದೆ.

ಒಕ್ಕೂಟದ ಧುರೀಣರಾದ ಬಿ.ಅಡಿವೆಪ್ಪ, ಕೆ.ಬಸವರಾಜ್, ಕೆ.ಸುರೇಶ್, ಬಿ.ರವಿ ಕುಮಾರ್, ಕಮರುನ್ನೀಸಾ ಹಾಗೂ ವೀರೇಶ್, ಜಹೀರ್ ಭಾಷಾ, ಜೀರು ಬಸವರಾಜ್ ಮತ್ತು ಇತರರು ಮನವಿ ಪತ್ರ ಸಲ್ಲಿಸಿದ್ದಾರೆ.

Leave a Comment