ಕುರುಬ ಸಮುದಾಯದ ಕ್ಷಮೆಯಾಚಿಸಿದ ಸುರೇಶ್‌ಗೌಡ

ತುಮಕೂರು, ಜೂ. ೨೦- ನಾನು ಕುರುಬ ಸಮುದಾಯದ ನಿಂದನೆ ಮಾಡಿಲ್ಲ. ನನ್ನ ಹೇಳಿಕೆಯಿಂದ ಸಮುದಾಯಕ್ಕೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳುವ ಮೂಲಕ ಮಾಜಿ ಶಾಸಕ ಬಿ. ಸುರೇಶ್‌ಗೌಡ ಅವರು ಇಂದಿಲ್ಲಿ ಕುರುಬ ಸಮುದಾಯದ ಕ್ಷಮೆ ಯಾಚಿಸಿದರು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪೊಲೀಸರ ಕಾರ್ಯವೈಖರಿ ವಿರುದ್ಧ ಹರಿಹಾಯುವ ಭರಾಟೆಯಲ್ಲಿ ಹೆಬ್ಬೂರು ಪೊಲೀಸ್ ಠಾಣೆಯ ಪೊಲೀಸ್ ಪೇದೆ ಪುಟ್ಟರಾಜು ಅವರನ್ನು ವೈಯಕ್ತಿಕವಾಗಿ 420 ಎಂದು ಕರೆದದ್ದು ನಿಜ. ಆದರೆ ಇಡೀ ಕುರುಬ ಸಮುದಾಯವನ್ನೇ 420 ಎಂದು ನಾನು ಹೇಳಿಲ್ಲ. ವಿನಾ ಕಾರಣ ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸಲು ಈ ರೀತಿ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಾನು ಯಾರು ಈ ಪುಟ್ಟರಾಜು, ಕುರುಬ ಸಮುದಾಯದ ವ್ಯಕ್ತಿಯೇ ಎಂದು ಕೇಳಿದ್ದೇನೆ. ಆದರೆ ಇಡೀ ಕುರುಬ ಸಮುದಾಯವನ್ನು ನಾನು ನಿಂದಿಸಿಲ್ಲ. ಆದರೂ ನನ್ನ ಹೇಳಿಕೆ ಕುರುಬ ಸಮುದಾಯದ ಮುಖಂಡರಲ್ಲಿ ನೋವು ತಂದಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಕ್ಷಮೆ ಕೇಳುವುದರಿಂದ ಚಿಕ್ಕವನಾಗುವುದಿಲ್ಲ. ಹಾಗಾಗಿ ಈ ಸಮಾಜದ ಮುಖಂಡಲ್ಲಿ ಕ್ಷಮೆಯಾಚಿಸುವುದಾಗಿ ಪುನರುಚ್ಚರಿಸಿದರು.

ಹೆಬ್ಬೂರು ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಸದರಿ ಕಾನ್‌ಸ್ಟೇಬಲ್‌ನನ್ನು ಬಳಸಿಕೊಂಡು ಕಾನೂನು ಬಾಹಿರ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಮೇಲಾಧಿಕಾರಿಯ ಆದೇಶ ಪಾಲಿಸಬೇಕಾದ್ದು ಈ ಕಾನ್‌ಸ್ಟೇಬಲ್ ಕಾಯಕ. ಹಾಗಾಗಿ ಅವರನ್ನು ನಾನು ಹೊಣೆಯಾಗಿಸುವುದಿಲ್ಲ. ಸಬ್‌ಇನ್ಸ್‌ಪೆಕ್ಟರ್ ವಿರುದ್ಧ ತನಿಖೆಯಾಗಲೇಬೇಕು. ಈ ಸಂಬಂಧ ನಾನು ಗೃಹ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 10 ವರ್ಷಗಳ ಕಾಲ ಶಾಸಕನಾಗಿ ಕೆಲಸ ಮಾಡಿದ್ದೇನೆ. ಈ ಕ್ಷೇತ್ರದಲ್ಲಿ ಎಲ್ಲ ಸಮುದಾಯಕ್ಕೂ ನ್ಯಾಯ ಒದಗಿಸಿದ್ದೇನೆ. ಕ್ಷೇತ್ರದ ಜನರು ಸಹ ನನ್ನನ್ನು ಅಷ್ಟೇ ಪ್ರೀತಿ ವಿಶ್ವಾಸಗಳಿಂದ ಕಾಣುತ್ತಾರೆ ಎಂದರು.

ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸೋತ ನಂತರ ನನ್ನ ವಿರುದ್ಧ ಈ ರೀತಿಯ ಕುತಂತ್ರಗಳು ನಡೆಯುತ್ತಲೇ ಇವೆ. ನನ್ನ ಮೇಲೆ ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಇದೆಲ್ಲಾ ಸಮಂಜಸವಲ್ಲ ಎಂದರು.

ನಾವು ವಿರೋಧ ಪಕ್ಷದಲ್ಲಿದ್ದೇವೆ. ಹಾಗಾಗಿ ಆಡಳಿತ ಪಕ್ಷದವರ ಲೋಪಗಳನ್ನು ಎತ್ತಿ ಹಿಡಿದು ಅವರ ಕಾರ್ಯವೈಖರಿ ವಿರುದ್ಧ ಟೀಕೆ ಮಾಡತ್ತಿದ್ದೇನೆ. ಇದಕ್ಕೆ ರಾಜಕೀಯ ಬಣ್ಣ ಬೆರೆಸುವುದು ಬೇಡ, ಇದರಲ್ಲಿ ಯಾವುದೇ ವೈಯಕ್ತಿಕ ದ್ವೇಷ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ನಾನು 16ನೇ ವರ್ಷಕ್ಕೆ ರಾಜಕೀಯಕ್ಕೆ ಬಂದವನು. ಸತತ 35 ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದೇನೆ. ಅಂದಿನಿಂದ ಇಂದಿನವರೆಗೂ ಹೆದರಿಕೆ, ಬೆದರಿಕೆ ಎಂಬುದು ನನ್ನ ರಕ್ತದಲ್ಲಿಲ್ಲ. ನಾನು ಹೆದರುವುದು ನನಗೆ ಮತ ಹಾಕಿದ ಕ್ಷೇತ್ರದ ಜನತೆಗೆ ಹಾಗೂ ತಪ್ಪು ಮಾಡಿದಾಗ ಮಾತ್ರ ಎಂದು ಅವರು ಹೇಳಿದರು.

ನಮ್ಮ ಕ್ಷೇತ್ರ ಭ್ರಷ್ಟಾಚಾರ ಮುಕ್ತವಾಗಿರಬೇಕು ಎಂಬುದು ನನ್ನ ಬಯಕೆ. ಅಧಿಕಾರಿಗಳು ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುವ ಜತೆಗೆ ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು. ಇಲ್ಲದಿದ್ದರೆ ನನ್ನ ಹೋರಾಟ ಇದೇ ರೀತಿ ಮುಂದುವರೆಯುತ್ತದೆ ಎಂದರು.

ಕ್ಷೇತ್ರ ಶಾಸಕರು ದ್ವೇಷದ ಕಾರಣ ಮಾಡುವುದನ್ನು ಬಿಟ್ಟು ಅಭಿವೃದ್ಧಿ ರಾಜಕಾರಣಕ್ಕೆ ಒತ್ತು ನೀಡಲಿ ಎಂದು ಅವರು ಸಲಹೆ ಮಾಡಿದರು.

ಕುರುಬ ಸಮುದಾಯದ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ಮಾತನಾಡಿ, ಮಾಜಿ ಶಾಸಕ ಸುರೇಶ್‌ಗೌಡ ಅವರು ಪೊಲೀಸ್ ಪೇದೆ ಕಾರ್ಯವೈಖರಿ ಬಗ್ಗೆ ಹರಿಹಾಯುವ ಭರಾಟೆಯಲ್ಲಿ ಕುರುಬ ಸಮುದಾಯದ ಬಗ್ಗೆ ಮಾತನಾಡಿದ್ದಾರೆ. ಆದರೆ ಜಾತಿ ನಿಂದನೆ ಮಾಡಿಲ್ಲ. ವ್ಯಕ್ತಿಗತವಾಗಿ ಟೀಕೆ ಮಾಡಿದ್ದಾರೆ. ಆದರೂ ಅವರು ಸಮುದಾಯದ ಕ್ಷಮೆ ಯಾಚಿಸಿದ್ದಾರೆ. ಇದನ್ನು ಮುಂದುವರೆಸುವುದು ಬೇಡ, ಇಲ್ಲಿಗೆ ಬಿಡೋಣ ಎಂದು ಸಮುದಾಯದ ಮುಖಂಡರಲ್ಲಿ ಮನವಿ ಮಾಡಿದರು.

Leave a Comment