ಕುದುರೆಗಳ ಮಾರಣಹೋಮ ತಡೆಯುವಂತೆ ಸಾರ್ವಜನಿಕರ ಮನವಿ

ಮುಂಡಗೋಡ,ಜ17 : ತಾಲೂಕಿನಲ್ಲಿ ಕೆಲವು ತಿಂಗಳ ಹಿಂದೆ ಕುರಿಗಾಹಿಗಳು ಬಿಟ್ಟು ಹೋದ ಕುದುರೆಗಳನ್ನು ಕೆಲವು ರೈತರು ತಮ್ಮ ಹೊಲಗಳಿಗೆ ಬಂದಾಗ ಅವುಗಳನ್ನು ತಮ್ಮ ಸ್ವಾರ್ಥಕ್ಕಾಗಿ ಕೊಂದು ತಮ್ಮ ಹೊಲಗಳಲ್ಲಿಯೇ ಹೂತು ಹಾಕುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.
ಕಳೆದ 2-3 ತಿಂಗಳ ಹಿಂದೆ ಉತ್ತರ ಕರ್ನಾಟಕದ ಭಾಗದಲ್ಲಿ ಆದ ನೆರೆಹಾವಳಿಯಿಂದ ಕಂಗೆಟ್ಟ ಕುರಿಗಾಹಿಗಳು ನೂರಾರು ಕುದುರೆಗಳನ್ನು ತಂದು ತಾಲೂಕಿನಲ್ಲಿ ಬಿಟ್ಟು ಹೋಗಿದ್ದರು. ಕೆಲವು ಕುದುರೆಗಳು ಗುಂಪುಗುಂಪಾಗಿ ಪಟ್ಟಣದ ಮುಖ್ಯ ರಸ್ತೆಗಳ ಮೇಲೆ ನಿಂತು ವಾಹನ ಚಾಲಕರಿಗೆ, ಬೈಕ್ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿತ್ತು. ನಂತರ ಇಲ್ಲಿನ ಪಟ್ಟಣ ಪಂಚಾಯಿತಿಯವರು ಅವುಗಳನ್ನು ಕಾಡಿನತ್ತ ಓಡಿಸಿದ್ದರು. ಇದಲ್ಲದೇ ಕೆಲವು ಕುದುರೆಗಳನ್ನು ಗ್ರಾಮೀಣ ಭಾಗಗಳಲ್ಲಿ ಬಿಡಲಾಗಿತ್ತು. ಕುದುರೆಗಳು ಕಾಡಿನ ಅಕ್ಕ-ಪಕ್ಕದ ಹೊಲ-ಗದ್ದೆಗಳಲ್ಲಿ ನುಗ್ಗಿ ಬೆಳೆಗಳನ್ನು ತಿನ್ನುತ್ತಿದ್ದವು. ಕುದುರೆಗಳನ್ನು ಕೊಂದು ತಮ್ಮ ಹೊಲದಲ್ಲಿ ಹೂತರೆ ಒಳ್ಳೆಯದಾಗುತ್ತದೆ ಎಂಬ ಮೂಢನಂಬಿಕೆಯಿಂದ ಈಗಾಗಲೇ     ತಾಲೂಕಿನ ಕೆಲವು ಗ್ರಾಮದಲ್ಲಿ ಕೆಲ ರೈತರು ತಮ್ಮ ಹೊಲ ಮತ್ತು ತೋಟಗಳಲ್ಲಿ ಬಂದ ಕುದುರೆಗಳನ್ನು ಕೊಂದು ಹೂಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ ಕುದುರೆಗಳ ಮಾರಣ ಹೋಮ ತಡೆಯಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಮರಿಯಪ್ಪ ಹರಿಜನ ಗ್ರಾ.ಪಂ. ಮಾಜಿ ಅಧ್ಯಕ್ಷ, ಹುನಗುಂದ : ಕುದುರೆಗಳ ವಾರಸದಾರರು ಯಾರೂ ಇಲ್ಲ. ರೈತರ ಬೆಳೆ ತಿಂದು ಹಾನಿ ಮಾಡುತ್ತವೆ. ಕೆಲವು ರೈತರು ಕುದುರೆಗಳನ್ನು ಹೊಡೆದು ಕಾಲು ಮುರಿದರೆ ಇನ್ನು ಕೆಲವರು ಸತ್ತ ಕುದುರೆಯನ್ನು ತಮ್ಮ ಹೊಲದಲ್ಲಿ ಹೂತಿದ್ದಾರೆ. ಗ್ರಾಮದ ಸುತ್ತ ಬಹಳ ಕುದುರೆಗಳು ಇದ್ದು ಇವುಗಳಿಗೆ ಸೂಕ್ತ ರಕ್ಷಣೆ ಸಿಗುವಂತಾಗಬೇಕು.

Leave a Comment