ಕುದಿಯುವ ಬಿಸಿ ನೀರು ಸುರಿದು ಪತಿಯ ಪ್ರೇಯಸಿಯ ಕೊಂದ ಹೆಂಡತಿ!

ಹೈದರಾಬಾದ್, ನ ೧೪- ತಾಳಿ ಕಟ್ಟಿದ ಗಂಡನ ಇನ್ನೊಂದು ಪ್ರೇಮದಾಟ ತಿಳಿದ ಪತ್ನಿಯೊಬ್ಬಳು ಗಂಡನ ಪ್ರಿಯತಮೆಯನ್ನು ಕೊತ ಕೊತ ಕುದಿಯುವ ಬಿಸಿ ನೀರು ಸುರಿದು ಹತ್ಯೆ ಮಾಡಿದ್ದಾಳೆ. ಉಪ್ಪಾರಪಳ್ಳಿಯ ಸತ್ಸಂಗ ವಿಹಾರ ಕಾಲೋನಿಯಲ್ಲಿ ನವೆಂಬರ್ ೭ರಂದು ಈ ಘಟನೆ ನಡೆದಿದ್ದು, ಸುಟ್ಟ ಗಾಯಗಳೊಂದಿಗೆ ಮಹಿಳೆಯನ್ನು ಒಸ್ಮಾನಿಯಾ ಆಸ್ಪತೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕಳೆದ ಶನಿವಾರ ಮೃತಪಟ್ಟಿದ್ದಾಳೆ.

ಘಟನೆ ವಿವರ: ಉಪ್ಪಾರಪಳ್ಳಿಯ ಸತ್ಸಂಗ ವಿಹಾರ ಕಾಲೋನಿಯಲ್ಲಿ ಛತ್ತೀಸ್ ಗಢ ಮೂಲದ ರಾಜು ಮತ್ತು ರೆಹಮತ್ ಮದುವೆಯಾಗಿ ವಾಸ ಮಾಡುತ್ತಿದ್ದರು. ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಒಂದು ಬಾರಿ ರೆಹಮತ್ ತನ್ನ ತವರು ಮನೆಗೆ ತೆರಳಿದ್ದಾಗ ಆಕೆಯ ಪತಿಗೆ ಪಕ್ಕದ ಮನೆಯ ೨೫ ವರ್ಷದ ಚಂದ್ರಿಕಾಳ ಪರಿಚಯವಾಗಿದೆ. ರೆಹಮತ್ ವಾಪಸ್ ಬಂದರೂ ಇವರಿಬ್ಬರ ಪ್ರಣಯ, ಚಕ್ಕಂದ ನಿಂತಿರಲಿಲ್ಲ. ಇದರಿಂದ ರೆಹಮತ್ ತನ್ನ ಪತಿ ರಾಜು ಹಾಗೂ ಚಂದ್ರಿಕಾ ಮೇಲೆ ತೀವ್ರ ಸಿಟ್ಟಾಗಿದ್ದಳು.

ನವೆಂಬರ್ ೭ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ರೆಹಮತ್ ಚಂದ್ರಿಕಾಳನ್ನು ಮನೆಗೆ ಆಹ್ವಾನಿಸುತ್ತಾಳೆ. ಚಂದ್ರಿಕಾ ಮೇಲೆ ಪ್ರತೀಕಾರ ಮಾಡಲೆಂದೇ ಸಿದ್ಧಳಾಗಿದ್ದ ರೆಹಮತ್ ಆಗಲೇ ಕೊತ ಕೊತ ಕುದಿಯುವ ಬಿಸಿ ನೀರು ರೆಡಿ ಮಾಡಿಟ್ಟಿದ್ದಳು. ಚಂದ್ರಿಕಾ ಮನೆಯೊಳಗೆ ಬಂದು ಕೂರುತ್ತಿದ್ದಂತೆಯೇ ರೆಹಮತ್ ಬಿಸಿ ನೀರನ್ನು ಚಂದ್ರಿಕಾ ಮೇಲೆ ಸುರಿದಿದ್ದಾಳೆ. ಇದರಿಂದಾಗಿ ಚಂದ್ರಿಕಾ ಮೈಯೆಲ್ಲಾ ಸುಟ್ಟು ಹೋಗಿತ್ತು. ಕಿರುಚಾಟ ಕೇಳಿ ಬಂದ ಕಾಲೋನಿ ನಿವಾಸಿಗಳು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಚಿಂತಾಜನಕ ಸ್ಥಿತಿಯಲ್ಲಿದ್ದ ಚಂದ್ರಿಕಾ ಶನಿವಾರ ಸಾವನ್ನಪ್ಪಿದ್ದಾಳೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Leave a Comment