ಕುತೂಹಲ ಕೆರಳಿಸಿದೆ ಹರಪನಹಳ್ಳಿ ಬಿಜೆಪಿ ಟಿಕೆಟ್

ದಾವಣಗೆರೆ, ಏ. ೧೬ – ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಸಂಸದ ಶ್ರೀರಾಮುಲು ತಮ್ಮ ಆಪ್ತ ಅರಸಿಕೆರೆ ಕೊಟ್ರೇಶ್ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ.
ಮಾಜಿ ಸಚಿವ ಕರುಣಾಕರರೆಡ್ಡಿ ಹಾಗೂ ಸಂಸದ ಶ್ರೀರಾಮುಲು ನಡುವೆ ಆತ್ಮೀಯತೆ ಇಲ್ಲದಿರುವ ಹಿನ್ನಲೆಯಲ್ಲಿ ಅರಸಿಕೆರೆ ಕೊಟ್ರೇಶ್ ಗೆ ಈ ಬಾರಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಟಿಕೇಟ್ ನೀಡುವಂತೆ ಶ್ರೀರಾಮುಲು ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ಈ ಬಾರಿ ಸ್ಥಳೀಯರಿಗೆ ಟಿಕೇಟ್ ನೀಡಬೇಕೆನ್ನುವ ಕೂಗು ಸಹ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಸ್ಥಳೀಯರಾಗಿರುವ ಕೊಟ್ರೇಶ್ ಅವರಿಗೆ ಟಿಕೇಟ್ ನೀಡಬೇಕು ಎಂಬುದು ಬಿಜೆಪಿ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಹ ಕೊಟ್ರೇಶ್ ಗೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಎಂಬ ಬಗ್ಗೆ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿರುವ ಹಿನ್ನಲೆಯಲ್ಲಿ ಜಗಳೂರು ಹಾಗೂ ಹರಪನಹಳ್ಳಿಯಲ್ಲಿ ಅವರ ಪ್ರಭಾವ ಹೆಚ್ಚಾಗುತ್ತಿದೆ. ರಾಮುಲು ಪರಮಾಪ್ತ ಕೊಟ್ರೇಶ್ ಹರಪನಹಳ್ಳಿಯಲ್ಲಿ ಈಗಾಗಲೇ ಕಚೇರಿ ಪ್ರಾರಂಭಿಸಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.
ಕಳೆದ 2013 ರ ವಿಧಾನಸಭಾ ಚುನಾವಣೆಯಲ್ಲಿ ಕೆಜಿಪಿ ಪಕ್ಷದಿಂದ ಸ್ಪರ್ಧಿಸಿದ್ದ ಕೊಟ್ರೇಶ್ ಈ ಬಾರಿ ತಮಗೆ ಟಿಕೆಟ್ ಸಿಗುವ ಬಲವಾದ ನಿರೀಕ್ಷೆಯಲ್ಲಿದ್ದಾರೆ. ಇನ್ನು ಪಕ್ಷದ ಹೈಕಮಾಂಡ್ ಶ್ರೀರಾಮುಲುಗೆ ಹೆಚ್ಚಿನ ಜವಾಬ್ದಾರಿ ನೀಡಲು ಮುಂದಾಗಿದ್ದಾರೆ. ರಾಮುಲು ಆಸೆಯಂತೆ ಕೊಟ್ರೇಶ್ ಗೆ ಟಿಕೆಟ್ ದೊರೆಯುವುದೇ ಎಂಬುದು ಸಂಜೆ ವೇಳೆಗೆ ತಿಳಿದುಬರಲಿದೆ.

Leave a Comment