ಕುಡಿವ ನೀರು ಸಮಸ್ಯೆ ನಿವಾರಣೆ ವಿಫಲ

ತಾ.ಪಂ.ಇಓ, ಪಿಡಿಓ ವಿರುದ್ಧ ಆಕ್ರೋಶ
ರಾಯಚೂರು.ಮಾ.13- ಮಾನ್ವಿ ತಾಲೂಕು ಸೇರಿ ಜಿಲ್ಲೆಯಾದ್ಯಂತ ಆರಂಭದಲ್ಲಿಯೇ ಕುಡಿವ ನೀರಿನ ಸಮಸ್ಯೆ ತೀವ್ರಗೊಂಡಿದ್ದರೂ ಕೆರೆಗಳಿಗೆ ನೀರು ಹರಿಸುವಲ್ಲಿ ವಿಫಲರಾದ ತಾಲೂಕಾ ಕಾರ್ಯನಿರ್ವಾಹಕಾಧಿಕಾರಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಇಂಜಿನಿಯರ್ ವಿರುದ್ಧ ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನ‌ಡೆಯಿತು.
ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆ ಪ್ರಾರಂಭವಾಗುತ್ತಿದ್ದಂತೆ ಕುಡಿವ ನೀರಿನ ಸಮಸ್ಯೆ ಪ್ರಸ್ತಾಪಿಸಿದ ಅವರು, ತಾಲೂಕಿನ ಗಣದಿನ್ನಿ, ಅತ್ತನೂರು ಕ್ಯಾಂಪ್, ಶಾಖಾಪೂರು ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಬೇಸಿಗೆ ಪ್ರಾರಂಭದಲ್ಲಿಯೇ ಜನತೆ-ಜಾನುವಾರು ಹನಿ ನೀರಿಗೆ ಪರದಾಡುವಂತಾಗಿದೆ.
ಕಾಲುವೆ ಮಾರ್ಗವಾಗಿ ಗ್ರಾ.ಪಂ.ವಾರು ಕೆರೆಗಳಿಗೆ ನೀರು ಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ಸೂಚಿಸಿದರೂ, ಸಂಬಂಧಪಟ್ಟ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸದಸ್ಯರ ಸೂಚನೆಗೆ ಕನಿಷ್ಟ ಬೆಲೆಯಿಲ್ಲದಂತೆ ನಡೆದುಕೊಳ್ಳುವ ಮೂಲಕ ಅಗೌರವ ತೋರಲಾಗುತ್ತಿದೆ.
ಕುರ್ಡಿ ವ್ಯಾಪ್ತಿಯಲ್ಲಿ ಕುಡಿವ ನೀರಿನ ಸಮಸ್ಯೆ ಜಟಿಲಗೊಂಡಿದೆ. ತಾಲೂಕಾಡಳಿತ ಪರ್ಯಾಯ ವ್ಯವಸ್ಥೆಯಿಲ್ಲದೇ ಹನಿ ನೀರಿಲ್ಲದೆ ಬೇಸತ್ತ ಜನತೆ ಜಿ.ಪಂ.ಸದಸ್ಯರ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಲೂಕು ಮಟ್ಟದ ಅಧಿಕಾರಿಗಳ ಕರ್ತವ್ಯಲೋಪ, ನಿರ್ಲಕ್ಷ್ಯೆ ಧೋರಣೆಗೆ ಸದಸ್ಯರು ಜನತೆಯಿಂದ ಶಾಪಕ್ಕೊಳಗಾಗುವಂತಾಗಿದೆ. ಜಿಲ್ಲಾಡಳಿತ, ಜಿ.ಪಂ.ಆಡಳಿತ ನೀರಿನ ಸಮಸ್ಯೆ ನಿವಾರಣೆಯಲ್ಲಿ ಸಂಪೂರ್ಣ ವಿಫಲವಾಗಿರುವ ಅಧಿಕಾರಿಗಳ ರಕ್ಷಣೆಗೆ ನಿಂತಿದೆಂದು ಆರೋಪಿಸಿದ ಅವರು, ಗಣದಿನ್ನಿ ಹಾಗೂ ಅತ್ತನೂರು ಕ್ಯಾಂಪ್, ಶಾಖಾಪೂರ ಕೆರೆಗಳಿಗೆ ಸಂಜೆಯೊಳಗಾಗಿ ನೀರು ಹರಿಸಲೇಬೇಕೆಂದು ಪಟ್ಟು ಹಿಡಿದರು.
ಏಪ್ರಿಲ್ ಮೊದಲ ವಾರದಲ್ಲಿ ಕೆನಲ್‌ಗೆ ನೀರು ಹರಿಸಿದ ನಂತರ ಎಲ್ಲಾ ಕೆರೆಗಳನ್ನು ಭರ್ತಿಗೊಳಿಸಲಾಗುತ್ತದೆ. ತಾತ್ಕಾಲಿಕವಾಗಿ ಖಾಸಗಿ ಕೊಳವೆಬಾವಿ ಹಾಗೂ ಟ್ಯಾಂಕರ್‌ನಿಂದ ಜನರಿಗೆ ನೀರು ಹರಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಜಿ.ಪಂ.ಸಿಇಓ ಅಭಿರಾಮ ಜಿ.ಶಂಕರ್ ಹೇಳಿದರು. ಜಿಲ್ಲೆಯ ಯಾವ ತಾಲೂಕುಗಳಲ್ಲಿ ಕುಡಿವ ನೀರಿನ ಸಮಸ್ಯೆ ಜಟಿಲಗೊಂಡಿರುವುದನ್ನು ಅರಿತುಕೊಂಡು ಅಧಿಕಾರಿ ವರ್ಗ ಸಕಾಲಕ್ಕೆ ನೀರು ಪೂರೈಕೆಗೆ ಕಠಿಣ ಕ್ರಮ ಕೈಗೊಳ್ಳಬೇಕು. ದುರಸ್ತಿಗೀಡಾಗಿರುವ ಶುದ್ಧ ಕುಡಿವ ನೀರಿನ ಘಟಕವನ್ನು ಶೀಘ್ರ ದುರಸ್ತಿ ಮಾಡಬೇಕೆಂದು ಸೂಚಿಸಿದರು.
ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಶಿವನಗೌಡ ಗೋರೆಬಾಳ ಮಾತನಾಡಿ, ಪೋತ್ನಾಳ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ತಕ್ಷಣವೇ ಕೆರೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು. ಜಿ.ಪಂ.ಇಂಜಿನಿಯರ್ ಸಾಕ್ರೆ ಮಾತನಾಡಿ, ಜಿಲ್ಲೆಯಾದ್ಯಂತ 471 ಶುದ್ಧ ಕುಡಿವ ನೀರಿನ ಘಟಕ ನಿರ್ಮಿಸಲಾಗಿದ್ದು, ಈ ಪೈಕಿ 465 ಮಂಜೂರಾಗಿವೆ. 357 ಕಾರ್ಯನಿರ್ವಹಿಸುತ್ತಿವೆ. 108 ದುರಸ್ತಿಯಲ್ಲಿವೆ.
65 ಘಟಕ ದುರಸ್ತಿಗೆ ಈಗಾಗಲೇ ಸತೀಶ್ ಎಂಬುವರಿಗೆ ಟೆಂಡರ್ ನೀಡಲಾಗಿದೆಂದರು. ಶುದ್ಧ ಕುಡಿವ ನೀರಿನ ಘಟಕಗಳನ್ನು ಜಿಲ್ಲೆಯಾದ್ಯಂತ ಸಮರ್ಪಕವಾಗಿ ಆರಂಭಿಸಿ ಜನರಿಗೆ ಶುದ್ಧ ಕುಡಿವ ನೀರು ಪೂರೈಕೆಗೆ ಗಮನಹರಿಸಬೇಕೆಂದು ಜಿ.ಪಂ.ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಸೂಚಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment