ಕುಡಿವ ನೀರು ಲೋಡ್ ಶೆಡ್ಡಿಂಗ್, ಸಂಚಾರ ಅಸ್ತವ್ಯಸ್ತ-ಆಕ್ರೋಶ

* ಪವಿತ್ರ ರಂಜಾನ್: ಸ್ವಚ್ಛತೆ, ಶಾಂತಿ ಕಾಯ್ದುಕೊಳ್ಳಲು ಸೂಚನೆ
ರಾಯಚೂರು.ಜೂ.13- ಶಾಂತಿ ಪಾಲನಾ ಸಭೆಯನ್ನೇ ಮರೆತ ಮುಸ್ಲಿಂ ಸಮುದಾಯ ಮುಖಂಡರು ನಗರ ಕುಡಿವ ನೀರು ಸರಬರಾಜಿನಲ್ಲಿ ವ್ಯತ್ಯಯ, ಅನಿಯಮಿತ ಲೋಡ್ ಶೆಡ್ಡಿಂಗ್, ಸಂಚಾರ ದಟ್ಟಣೆಗೆ ಹರಿದಾಯ್ದ ಪ್ರಸಂಗ ನಡೆಯಿತು.
ಸ್ಥಳೀಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ಯಾಲಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರ ಅಧ್ಯಕ್ಷತೆಯಲ್ಲಿ ಪವಿತ್ರ ರಂಜಾನ್ ನಿಮಿತ್ಯ ಕರೆದ ಶಾಂತಿ ಪಾಲನಾ ಸಭೆ ಆರಂಭದಲ್ಲಿ ಸ್ಥಳೀಯ ತೀನ್ ಖಂದಿಲ್ ವೃತ್ತದಲ್ಲಿರುವ ಪ್ರಮುಖ ಬಡಾವಣೆಗಳಲ್ಲಿ ಕುಡಿವ ನೀರಿನ ಸಮಸ್ಯೆ ಜಟಿಲಗೊಂಡ ಕುರಿತು ಕಾಂಗ್ರೆಸ್ ಹಿರಿಯ ಮುಖಂಡ ನಜೀರ್ ಪಂಜಾಬಿ ಆಕ್ಷೇಪ ವ್ಯಕ್ತಪಡಿಸಿ, ನಿದ್ರೆಗೆ ಜಾರಿರುವ ನಗರಸಭೆ ಆಡಳಿತ ಮಂಡಳಿ ಚೆಲ್ಲಾಟದಿಂದಾಗಿ ನಗರ ವಾಸಿಗಳು ನಾಲ್ಕು ದಿನಕ್ಕೊಮ್ಮೆ ನೀರು ಪಡೆಯುವ ದುಸ್ಥಿತಿಯಿದೆ.
ಅಂದ್ರೂನ್ ಕಿಲ್ಲಾ, ಬೆರೂನ್ ಕಿಲ್ಲಾ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ದಿನ ಬಿಟ್ಟು ದಿನ ಬದಲಾಗಿ ನಾಲ್ಕು ದಿನಕ್ಕೊಮ್ಮೆ ತಡರಾತ್ರಿ ನೀರು ಸರಬರಾಜು ಮಾಡಿದರೆ ರಂಜಾನ್ ಮಾಸದಲ್ಲಿ ರೋಜಾ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ರಂಜಾನ್ ತಿಂಗಳಲ್ಲಿ ಅನವಶ್ಯಕ ವಿದ್ಯುತ್ ಕಡಿತಗೊಳಿಸದಂತೆ ಜೆಸ್ಕಾಂ ಇಲಾಖೆ ಸೇರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದೆ ಅನಿಯಮಿತ ವಿದ್ಯುತ್ ಕಡಿತಕ್ಕೆ ಜನತೆ ಬಸವಳಿಯುವಂತಾಗಿದೆ.
ರಾತ್ರಿ 8 ಗಂಟೆಗೆ ಪದೇ ಪದೇ ವಿದ್ಯುತ್ ಕಡಿತಗೊಳಿಸಿದರೆ ಮಸ್ಜೀದ್‌ಗಳಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದಾದರೂ ಹೇಗೆ ಎಂದು ಗರಂ ಆದರು. ಪವಿತ್ರ ರಂಜಾನ್ ತಿಂಗಳಲ್ಲಿ ದಿನ ಬಳಕೆ ಸಾಮಗ್ರಿ ಖರೀದಿಗೂ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತಲೆನೋವಾಗಿ ಪರಿಣಮಿಸಿದೆ. ಶಾಲಾ ಮಕ್ಕಳು ಇಕ್ಕಟ್ಟಿನಲ್ಲಿ ಸಂಚರಿಸುವ ದುಸ್ಥಿತಿಯಿದ್ದರೂ, ಸಂಚಾರಿ ಠಾಣಾ ಪೊಲೀಸ್ ಇಲಾಖೆಯಾಗಲಿ, ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಕನಿಷ್ಟ ಕಿವಿಗೊಡುತ್ತಿಲ್ಲ.
ಒಳ ಚರಂಡಿ ಕಾಮಗಾರಿ ನೆಪದಡಿ ಮಸ್ಜೀದ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಬಡಾವಣೆಗಳಲ್ಲಿ ಮನಬಂದಂತೆ ರಸ್ತೆ ಅಗೆದು ಹಾಗೆ ಬಿಡಲಾಗುತ್ತಿದೆ. ಈ ದುಸ್ಥಿತಿಯಿಂದಾಗಿ ರಾತ್ರಿ ನಮಾಜ್‌ಗೆ ತೆರಳುವ ನಿವಾಸಿಗಳು ತಗ್ಗು-ಗುಂಡಿಗಳಲ್ಲಿ ಬಿದ್ದು ಆಸ್ಪತ್ರೆಗೆ ಸೇರುವ ದಯಾನೀಯ ಸ್ಥಿತಿ ಬಂದೊದಗಿದೆಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿ.ಪಂ.ಮಾಜಿ ಸದಸ್ಯ ಆದೆಪ್ಪ ಮಾತನಾಡಿ, ನಗರ ಸ್ವಚ್ಛತೆಯಲ್ಲಿ ಸಂಪೂರ್ಣ ವಿಫಲವಾಗಿರುವ ಇಂತಹ ನಗರಸಭೆ ಆಡಳಿತ ಮಂಡಳಿಯನ್ನು ಎಲ್ಲಿಯೂ ನೋಡಿಲ್ಲ. ಸ್ವಚ್ಛತೆ ಕೇವಲ ಬಿಳಿ ಹಾಳಿಗೆ ಸೀಮಿತವೆನ್ನುವಂತಾಗಿ ನಗರಾಭಿವೃದ್ಧಿ ಮೂರಾಬಟ್ಟೆ ಎನ್ನುವಂತಾಗಿದೆಂದು ಕಾರವಾಗಿ ನುಡಿದರು. ರಸೂಲ್‌ಸಾಬ್ ಮಾತನಾಡಿ, ನಗರದಲ್ಲಿ ಉಲ್ಬಣಗೊಂಡಿರುವ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಪರ್ಯಾಯ ಟ್ಯಾಂಕರ್ ನೀರು ವ್ಯವಸ್ಥೆ ಕಲ್ಪಿಸುವಂತೆ ಪೌರಾಯುಕ್ತರ ಗಮನ ಸೆಳೆದರೂ ಸಂಬಂಧಪಟ್ಟ ಅವರು ಮಾತ್ರ ಪೂರಕ ಕ್ರಮಕ್ಕೆ ಮುತುವರ್ಜಿವಹಿಸುತ್ತಿಲ್ಲ.
ಮೂರು-ನಾಲ್ಕು ದಿನಕ್ಕೊಮ್ಮೆ ಕುಡಿವ ನೀರು ಸರಬರಾಜು ಮಾಡಿದ್ದಲ್ಲಿ ನಗರ ಜನತೆಯ ದಾಹ ತೀರಿಸುವುದಾದರೂ ಹೇಗೆ?.
ವಿದ್ಯುತ್ ಚೆಲ್ಲಾಟದಿಂದಾಗಿ ಮುಸ್ಲಿಂ ಬಾಂಧವರು ರಾತ್ರಿ ವೇಳೆ ಮಸ್ಜೀದ್‌ಗಳಲ್ಲಿ ಎಲೆಕ್ಟ್ರಾನಿಕ್ ದೀಪ ಹಿಡಿದು ಪ್ರಾರ್ಥನೆ ಮಾಡುವಂತಾಗಿದೆ. ವಿದ್ಯುತ್ ಕಡಿತಗೊಳಿಸದಂತೆ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರೂ ಸಂಬಂಧಪಟ್ಟವರು ಮಾತ್ರ ದೂರವಾಣಿ ಕರೆಗೂ ದೊರೆಯುತ್ತಿಲ್ಲವೆಂದು ಅಳಲು ತೋಡಿಕೊಂಡರು.
ಮಧ್ಯಸ್ಥಿಕೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಪವಿತ್ರ ರಂಜಾನ್ ಹಬ್ಬದ ನಿಮಿತ್ಯ ಕೆಲ ಬಡಾವಣೆಗಳಿಗೆ ಟ್ಯಾಂಕರ್ ನೀರು ವ್ಯವಸ್ಥೆ ಕಲ್ಪಿಸುವಂತೆ ಪೌರಾಯುಕ್ತರಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಕೆಲ ಅನಿವಾರ್ಯ ಕಾಮಗಾರಿ ನಿರ್ವಹಣೆಯಿಂದಾಗಿ ಕುಡಿವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಪ್ರಮುಖ ವೃತ್ತ ಸೇರಿ ಬಡಾವಣೆಗಳಲ್ಲಿ ಬೇಕಾಬಿಟ್ಟಿ ವಿದ್ಯುತ್ ಕಡಿತಗೊಳಿಸುವ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮವಹಿಸಲಾಗುವುದೆಂದ ಅವರು, ಅನವಶ್ಯ ವಿದ್ಯುತ್ ಕಡಿತಗೊಳಿಸದಂತೆ ಜೆಸ್ಕಾಂ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಪವಿತ್ರ ರಂಜಾನ್ ಹಬ್ಬಕ್ಕೆ ದಿನಗಣನೆ ಹಿನ್ನೆಲೆ, ನಗರದ ಪ್ರಮುಖ ವೃತ್ತಗಳಲ್ಲಿ ಸ್ವಚ್ಛತೆ ಕಾಯ್ದುಕೊಂಡು ಕುಡಿವ ನೀರಿನ ಪರ್ಯಾಯ ವ್ಯವಸ್ಥೆಗೆ ಕಟ್ಟೆಚ್ಚರ ವಹಿಸುವಂತೆ ಪೌರಾಯುಕ್ತ ರಮೇಶ ನಾಯಕ ಅವರಿಗೆ ಸ್ಪಷ್ಟವಾಗಿ ತಿಳಿಸಿದರು.
ಅಲ್ಲದೇ, ವಿಶೇಷ ಪ್ರಾರ್ಥನೆ ಸಲ್ಲಿಸುವ ಮಸ್ಜೀದ್ ಆವರಣದಲ್ಲಿ ಸ್ವಚ್ಛತೆಗೆ ಪ್ರಾಧಾನ್ಯತೆ ವಹಿಸಿ, ಅಗತ್ಯ ಸ್ಥಳಗಳಲ್ಲಿ ಕುಡಿವ ನೀರಿನ ಟ್ಯಾಂಕರ್ ವ್ಯವಸ್ಥೆಯೊಂದಿಗೆ ಹಬ್ಬ ದಿನದಂದು ಜನನಿಭಿಡ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ತಲೆದೂರದಂತೆ ಅಗತ್ಯ ಪೊಲೀಸ್ ಸಿಬ್ಬಂದಿ ನಿಯುಕ್ತಿಗೊಳಿಸುವಂತೆ ಎಸ್ಪಿ ಅವರಿಗೆ ಸೂಚಿಸಿದರು.
ನಗರಸಭೆ ಉಪಾಧ್ಯಕ್ಷ ಜಯಣ್ಣ, ಎ‌ಎಸ್ಪಿ ಶಿವಕುಮಾರ ಗುನಾರೆ ಉಪಸ್ಥಿತರಿದ್ದರು.

Leave a Comment