ಕುಡಿವ ನೀರು ನಿರ್ವಹಣೆ : ನಗರಸಭೆ ಅಧಿಕಾರಿ ವಿಫಲ

ರೊಚ್ಚಿಗೆದ್ದ ನಿವಾಸಿಗಳಿಂದ ಜೆಇ ಹಲ್ಲೆ ಯತ್ನ – ಉದ್ವಿಗ್ನ
ರಾಯಚೂರು.ಮಾ.14- ಕಳೆದ ಏಳು ದಿನಗಳಿಂದ ಹನಿ ನೀರಿಲ್ಲದೇ ಬೇಸತ್ತ ವಾರ್ಡ್ 16, 17 ಹಾಗೂ 18ರ ನಿವಾಸಿಗಳು ನೀರು ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾದ ನಗರಸಭೆ ಇಂಜಿನಿಯರ್‌ಗೆ ದಿಗ್ಬಂಧನೆ ಹಾಕಿ ಹಲ್ಲೆಗೆ ಯತ್ನಿಸಿದ ಪ್ರಸಂಗ ಉದ್ವಿಗ್ನ ಸ್ಥಿತಿಗೆ ದಾರಿ ಮಾಡಿತು.
ನಗರ ವ್ಯಾಪ್ತಿಗೆ ಬರುವ ವಾರ್ಡ್ 16, 17 ಹಾಗೂ 18ರ ವಾಸವಿನಗರ, ವಿದ್ಯಾನಗರ, ಮಾಣಿಕನಗರ, ತಿಮ್ಮಾಪೂರು ಪೇಟೆ, ಸಾವಿತ್ರಿಪುರಂ ಬಡಾವಣೆಗಳಿಗೆ ಕಳೆದ ಏಳು ದಿನಗಳಿಂದ ಕುಡಿವ ನೀರು ಸರಬರಾಜಾಗದೆ, ಹನಿ ನೀರಿಗಾಗಿ ಅಂಡಲೆದು ಬೇಸತ್ತ ನಿವಾಸಿಗಳಿಂದು ನಗರಸಭೆ ಕಾರ್ಯಾಲಯದಲ್ಲಿ ಮಿಂಚಿನ ಮುಷ್ಕರಕ್ಕಿಳಿದು ಪೌರಾಯುಕ್ತ ರಮೇಶ ನಾಯಕ ಅವರಿಗೆ ಕಾರ್ಯಾಲಯ ಮುಂಭಾಗದಲ್ಲಿಯೇ ದಿಗ್ಬಂಧನೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬೇಸಿಗೆ ಆರಂಭದಲ್ಲಿಯೇ
ಮೇಲ್ಕಂಡ ಬಡಾವಣೆ ಸೇರಿದಂತೆ ಬಹುತೇಕ ವಾರ್ಡ್‌ಗಳಲ್ಲಿ ಕುಡಿವ ನೀರಿನ ಸಮಸ್ಯೆ ಜಟಿಲಗೊಂಡಿದ್ದರೂ, ಸಂಬಂಧಪಟ್ಟ ಯಾವೊಬ್ಬಾಧಿಕಾರಿಗಳು ಟ್ಯಾಂಕರ್ ನೀರು ಒದಗಿಸುವ ಕನಿಷ್ಟ ಪರ್ಯಾಯ ವ್ಯವಸ್ಥೆ ಕೈಗೊಳ್ಳುತ್ತಿಲ್ಲ. ನಗರಸಭೆ ಕಾರ್ಯಾಲಯಕ್ಕೂ ಬಾರದೇ ಅತ್ತ ದೂರವಾಣಿ ಕರೆಗೂ ಸಿಗದೆ ಜನತೆ ಜೀವನದೊಂದಿಗೆ ಚೆಲ್ಲಾಟ ಮುಂದುವರೆಸಲಾಗಿದೆಂದು ಕಛೇರಿ ಆವರಣದಲ್ಲಿಯೇ ನಗರಸಭೆ ವಿರುದ್ಧ ದಿಕ್ಕಾರ ಕೂಗಿ ನೀರು ನಿರ್ವಹಣಾ ಇಂಜಿನಿಯರ್ ಅವರನ್ನು ಸ್ಥಳಕ್ಕೆ ಕರೆಯಿಸುವಂತೆ ಪಟ್ಟು ಹಿಡಿದರು.
ಪೌರಾಯುಕ್ತರ ದೂರವಾಣಿ ಕರೆ ಬಳಿಕ ಸ್ಥಳಕ್ಕಾಗಮಿಸಿ ಸಮಜಾಯಿಸಿ ನೀಡಲು ಮುಂದಾದ ನೀರು ನಿರ್ವಹಣಾ ಇಂಜಿನಿಯರ್ ತಿಪ್ಪಯ್ಯ ರವರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಸಂಗ ಕೆಲಕಾಲ ಉದ್ವಿಗ್ನ ಸ್ಥಿತಿಗೆ ದಾರಿ ಮಾ‌ಡಿತು. ನಗರಸಭೆ ಸದಸ್ಯ ಎ.ಮಾರೆಪ್ಪ ಮಾತನಾಡಿ, ಕಳೆದ ಏಳು ದಿನಗಳಿಂದ ಬಡಾವಣೆಗೆ ನೀರು ಹರಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನತೆ ತೆರಿಗೆ ಹಣದಲ್ಲಿ ಆಡಳಿತ ನಿರ್ವಹಿಸುವ ನಗರಸಭೆ ಆಡಳಿತ ಮಂಡಳಿ ಸಾರ್ವಜನಿಕರ ನ್ಯಾಯಯುತ ಹಕ್ಕಾಗಿರುವ ಕುಡಿವ ನೀರಿನ ಸೌಲಭ್ಯ ಕಲ್ಪಿಸದಿದ್ದಲ್ಲಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುವುದಾದರೂ ಯಾವ ಪುರುಷಾರ್ಥಕ್ಕೆ ಎಂದು ಟೇಬಲ್ ಕುಟ್ಟಿ ಆಯುಕ್ತರನ್ನು ಏಕವಚನದಲ್ಲಿಯೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ನೀರಿಲ್ಲದೆ ರೋಸಿ ಹೋದ ನಿವಾಸಿಗಳಿಂದ ಹಲ್ಲೆ ಯತ್ನ ಪ್ರಸಂಗ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಾಲಯದಲ್ಲಿದ್ದ ಇತರೆ ಸಿಬ್ಬಂದಿ ವರ್ಗ ಕೋಣೆಗೆ ಬೀಗ ಜಡಿದು ಒಬ್ಬರಿಂದೊಬ್ಬರಂತೆ ಘಟನಾ ಸ್ಥಳದಿಂದ ತಂಟೆಕಿತ್ತಿರುವುದು ಗಮನಾರ್ಹವಾಗಿತ್ತು. ಹಲ್ಲೆ ಯತ್ನ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ನಗರಸಭೆ ಉಪಾಧ್ಯಕ್ಷ ಜಯಣ್ಣ ರವರು ನಿವಾಸಿಗಳನ್ನು ಮನವೋಲಿಸುವ ಕಾರ್ಯಕ್ಕೆ ಮುಂದಾದರೂ, ಇದ್ಯಾವುದಕ್ಕೂ ಕ್ಯಾರೆ ಎನ್ನದ ಬಡಾವಣೆ ವಾಸಿಗಳು ತಮ್ಮ ವಾರ್ಡ್‌ಗಳಿಗೆ ಕುಡಿವ ನೀರು ಸರಬರಾಜು ಮಾ‌ಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಪೌರಾಯುಕ್ತರ ಕಾರ್ಯಾಲಯ ಆವರಣದಲ್ಲಿಯೇ ಪ್ರತಿಭಟನಾ ನಿರತವಾಗಿರುವುದು ಸ್ಥಳದಲ್ಲಿದ್ದ ಇತರೆ ಸಿಬ್ಬಂದಿ ವರ್ಗವನ್ನು ಮುಜುಗರಕ್ಕೆಡೆಯಾಗುವಂತೆ ಮಾಡಿತು.

Leave a Comment