ಕುಡಿವ ನೀರಿಗೆ ಶಾಶ್ವತ ಯೋಜನೆ: ದೇವೇಗೌಡ

ತುಮಕೂರು, ಏ. ೧೫- ಅನೇಕ ಹಿರಿಯ ಮುಖಂಡರ ಸಲಹೆ ಮೇರೆಗೆ ಈ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಮುಂದಿನ 5 ವರ್ಷದಲ್ಲಿ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗೂ ಕುಡಿಯುವ ನೀರಿನ ಶಾಶ್ವತ ಯೋಜನೆ ರೂಪಿಸುವ ಚಿಂತನೆ ತಮ್ಮದಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಮೈತ್ರಿ ಅಭ್ಯರ್ಥಿ ಹೆಚ್.ಡಿ. ದೇವೇಗೌಡ ಹೇಳಿದರು.

ನಗರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ನಾನು ಗೆದ್ದರೆ ದೇಶಕ್ಕೆ ಮತ್ತು ತುಮಕೂರು ಜಿಲ್ಲೆಗೆ ಸಣ್ಣ ಕಾಣಿಕೆ ನೀಡಲು ಸಾಧ್ಯವಾಗಲಿದೆ ಎಂದರು.

ಭಿನ್ನಾಭಿಪ್ರಾಯ ಮರೆತು ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್‌ಗಾಂಧಿ ಅವರನ್ನು ಪ್ರಧಾನಿಯನ್ನಾಗಿಸಲು ಎಲ್ಲ ಪ್ರಾದೇಶಿಕ ಪಕ್ಷಗಳ ನಾಯಕರ ಒಪ್ಪಿಗೆ ಇದೆ. ಅದು ನಮ್ಮ ಧರ್ಮ ಕೂಡ. ಅಧಿಕಾರಕ್ಕೆ ಬಂದರೆ ಪ್ರತ್ಯೇಕ ಕೃಷಿ ಬಜೆಟ್ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ ಎಂದರು.

ನಾನು ಪ್ರಧಾನಿಯಾಗಿದ್ದಾಗ 11 ತಿಂಗಳ ಕಾಲ ದೇಶದ ಜಿಡಿಪಿ, ಕೃಷಿ, ಹೈನುಗಾರಿಕೆ, ಪಶುಸಂಗೋಪನೆಯಿಂದ ಶೇ. 9.9 ರಷ್ಟು ಆದಾಯ ಇತ್ತು. ನಂತರ ಆ ಮಟ್ಟದಲ್ಲಿ ಆದಾಯ ಬಂದಿಲ್ಲ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ. ರಫೀಕ್ಅಹಮದ್, ಜೆಡಿಎಸ್ ಮುಖಂಡ ಗೋವಿಂದರಾಜು, ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್, ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Leave a Comment