ಕುಡಿವ ನೀರಿಗೆ ಖಾಲಿ ಕೊಡ ಹಿಡಿದು ಪ್ರತಿಭಟನೆ

ರಾಯಚೂರು.ಆ.10- ಕುಡಿಯುವ ನೀರಿಗೆ ಆಗ್ರಹಿಸಿ ಮಹಿಳೆಯರು ಖಾಲಿ ಕೊಡ ಹಿಡಿದು ಬೃಹತ್ ಪ್ರತಿಭಟನೆ ನಡೆಸಿದ ಪ್ರಸಂಗ ನಗರದ ವಾರ್ಡ್ ನಂ.28 ರ ವ್ಯಾಪ್ತಿಯಲ್ಲಿ ಬರುವ ಹಳೇ ಆಶ್ರಯ ಕಾಲೋನಿಯಲ್ಲಿ ಜರುಗಿದೆ.
ಕಳೆದ ಅನೇಕ ದಿನಗಳಿಂದ ನಿವಾಸಿಗಳು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಸ್ಪಂದಿಸದಿರುವುದರಿಂದ ಜನರು ಇಂದು ರೊಚ್ಚಿಗೆದ್ದು ಖಾಲಿ ಕೊಡ ಹಿಡಿದು ಚಂದ್ರಬಂಡಾ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಡಾ.ಶಿವರಾಜ್ ಪಾಟೀಲ್ ಅವರಿಗೆ ಕುಡಿವ ನೀರಿನ ಸಮಸ್ಯೆ ನಿವಾರಿಸಲು ಮನವಿ ಸಲ್ಲಿಸಲಾಗಿತ್ತು. ಜನರ ಸಮಸ್ಯೆಗಳನ್ನು ಅರಿತುಕೊಂಡು, ಶಾಸಕರು ತಕ್ಷಣವೇ ಕಾಮಗಾರಿ ಆರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರೂ ಕಾಮಗಾರಿ ಆರಂಭಿಸುವಲ್ಲಿ ನಿರ್ಲಕ್ಷಧೋರಣೆ ಅನುಸರಿಸುತ್ತಿರುವುದಕ್ಕೆ ಜನರು ಕೆಂಡಾಮಂಡಲಗೊಂಡರು.
ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದರಿಂದ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ಉದ್ಭವಿಸಿದೆ. ಕೂಡಲೇ ನಗರಸಭೆ, ಚುನಾಯಿತ ಸದಸ್ಯರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ನೀರಿನ ಸಮಸ್ಯೆ ನಿವಾರಿಸಬೇಕೆಂದು ಒತ್ತಾಯಿಸಿದ್ದಾರೆ.

Leave a Comment