ಕುಡಿಯುವ ನೀರಿನ ಬಾವಿಗೆ ವಿಷ : ಮಹಿಳೆ ಸಾವು, ನಾಲ್ವರು ಅಸ್ವಸ್ಥ

 

ಕೆಂಭಾವಿ,ಜ.10-ಮೈಸೂರು ಜಿಲ್ಲೆಯ ಹನೂರು ತಾಲ್ಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನ ಪ್ರಸಾದ ಸೇವಿಸಿ 17 ಜನ ಮೃತಪಟ್ಟ ದುರಂತ ಪ್ರಕರಣ ಜನರ ಮನಸ್ಸಿನಿಂದ ಮರೆಯಾಗುವ ಮುನ್ನವೇ ಸುರಪುರ ತಾಲ್ಲೂಕಿನ ಕೆಂಭಾವಿ ಸಮೀಪದ ತೆಗ್ಗೆಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗೆ ವಿಷ ಬೆರೆಸಿದ ಪ್ರಕರಣ ನಡೆದಿದೆ.

ಇಲ್ಲಿಗೆ ಸಮೀಪದ ತೆಗ್ಗೆಳ್ಳಿ ಶಖಾಪೂರ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಬಾವಿಗೆ ಕಿಡಿಗೇಡಿಗಳು ವಿಷ ಬೆರೆಸಿದ್ದು, ವಿಷ ಪೂರಿತ ನೀರು ಕುಡಿದು ಮಹಿಳೆಯೊಬ್ಬರು ಮೃತಪಟ್ಟು, ನಾಲ್ವರು ಅಸ್ವಸ್ಥರಾಗಿದ್ದಾರೆ.

ಮೃತರನ್ನು ತೆಗ್ಗೆಳ್ಳಿ ಗ್ರಾಮದ ಹೊನ್ನಮ್ಮ (65) ಎಂದು ಗುರುತಿಸಲಾಗಿದೆ. ವಿಷ ಬೆರೆತ ನೀರು ಸೇವಿಸಿ ತೀವ್ರ ಅಸ್ವಸ್ಥರಾಗಿದ್ದ ಹೊನ್ನಮ್ಮ ಅವರನ್ನು ಕೆಂಭಾವಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಕರೆತರುತ್ತಿದ್ದಾಗ ಮಾರ್ಗ ಮಧ್ಯೆದಲ್ಲಿಯೇ ಮೃತಪಟ್ಟಿದ್ದಾರೆ.

ವಿಷ ಪೂರಿತ ನೀರು ಸೇವಿಸಿ ನಾಲ್ವರನ್ನು ಕೆಂಭಾವಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸುರಪುರ ತಾಲೂಕಿನ ಮುದನೂರ ಗ್ರಾಮದಿಂದ 7 ಕಿ. ಮೀ. ಅಂತರದಲ್ಲಿರುವ ತೆರೆದ ಬಾವಿಯಿಂದ ತೆಗ್ಗೆಳ್ಳಿ ಶಖಾಪೂರ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಬುಧವಾರ ಬೆಳಿಗ್ಗೆ ಪಂಪ್ ಆಪರೇಟರ್ ನೀರು ಬಿಡಲು ಗ್ರಾಮಕ್ಕೆ ಹೋದಾಗ ಬಾವಿಯಲ್ಲಿ ವಿಷದ ಬಾಟಲ್ ಗಳು ಬಿದ್ದಿರುವುದನ್ನು ಗಮನಸಿದಿದ್ದಾರೆ. ತಕ್ಷಣವೇ ಅವರು ಕೆಂಭಾವಿ ಪೋಲೀಸ್ ಠಾಣೆಗೆ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ್ದಾರೆ.

ಸುದ್ದಿ ತಿಳಿದು ಅರಕೇರಾ (ಜೆ) ಗ್ರಾ.ಪಂ. ಪಿಡಿಓ ಸಿದ್ಧರಾಮಪ್ಪ ಹಾಗೂ ಗ್ರಾ. ಪಂ. ಸದಸ್ಯರು ಸ್ಥಳಕ್ಕೆ  ಭೇಟಿ ನೀಡಿ ಬಾವಿಯಲ್ಲಿನ ನೀರನ್ನು ಸ್ವಚ್ಚತೆ  ಮಾಡಿಸುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ವೈದ್ಯಾಧಿಕಾರಿಗಳ ತಂಡ ಹಾಗೂ ಕೆಂಭಾವಿ ಪೋಲೀಸ್ ಠಾಣೆಯ ಪಿಎಸ್ಐ ಅಜೀತ್ ಕುಮಾರ ಭೇಟಿ ನೀಡಿದ್ದಾರೆ.

@12bc = ಸಿಇಓ ಭೇಟಿ

ಸುದ್ದಿ ತಿಳಿದು ಜಿಲ್ಲಾ ಪಂಚಾಯತಿ ಮುಖ್ಯಾಕಾರ್ಯನಿವಾರ್ಹಕ ಅಧಿಕಾರಿ ಕವಿತಾ ಮನ್ನಿಕೇರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸಿಪಿಐ ಪಂಡಿತ್ ಸಾಗರಿಗೆ ಸೂಚನೆ ನೀಡಿದರು. ವಿಷ ಬೆರೆತ ನೀರನ್ನು ಲ್ಯಾಬ್ ಟೆಸ್ಟ್ ಗೆ ಕಳುಹಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ನಂತರ ತೆಗ್ಗೆಳ್ಳಿ ಶಖಾಪೂರ ಗ್ರಾಮಕ್ಕೆ ತೆರಳಿ ಮನೆಯಲ್ಲಿದ್ದ ಜನರಿಗೆ ನೀರನ್ನು ಕುಡಿಯಬೇಡಿ ಯಾವುದೇ ರೀತಿ ಭಯಭೀತರಾಗುವ ಅವಶ್ಯಕತೆಯಿಲ್ಲ. ಜಿಲ್ಲಾಡಳಿತ ನಿಮ್ಮೊಂದಿಗೆ ಇದೆ ಇಲ್ಲಿ ವೈದ್ಯರ ತಂಡ ಒಂದನ್ನು ನಿಯೋಜಿಸಲಾಗಿದ್ದು, ಅಸ್ವಸ್ಥರಾದವರಿಗೆ ಸೂಕ್ತ ಚಿಕಿತ್ಸೆ ನೀಡಲಿದೆ ಎಂದು ತಿಳಿಸಿದರು.

ಈ ಗ್ರಾಮಕ್ಕೆ ಪರ್ಯಾಯ  ನೀರಿನ ವ್ಯವಸ್ಥೆ ಮಾಡುವ ಸಲುವಾಗಿ ತಕ್ಷಣ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಈ ಸಂಧರ್ಭದಲ್ಲಿ ಸಿಪಿಐ ಪಂಡಿತ್ ಸಾಗರ, ವೈದ್ಯಾಧಿಕಾರಿ ವಿಶ್ವನಾಥ ಬಿರಾದಾರ, ಪಿಎಸ್‍ಐ ಅಜೀತ್‍ಕುಮಾರ, ತಾಲೂಕಾ ದಂಡಾಧಿಕಾರಿಗಳು ಸೇರಿದಂತೆ ಹಲವರಿದ್ದರು.

Leave a Comment