ಕುಡಿಯುವ ನೀರಿಗೆ ತತ್ವಾರ – ಖಾಲಿ ಕೊಡಗಳೊಂದಿಗೆ ಪ್ರತಿಭಟನೆ

ಶಿವಮೊಗ್ಗ, ಫೆ. 12: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ, ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಬೀರನಕೆರೆ ಗ್ರಾಮಸ್ಥರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಡಳಿತಕ್ಕೆ ಮನವಿ ಪತ್ರ ಅರ್ಪಿಸಿದರು.
ಗ್ರಾಮದ ಕಾಮನಹಳ್ಳಿ ಈಶ್ವರಪ್ಪರವರ ಮನೆಯಿಂದ ಶಾಂತಮ್ಮ ಎಂಬುವರ ಮನೆಯವರೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ನೀರಿನ ಅಭಾವವಿದೆ. ಈ ಸಂಬಂಧ ಸ್ಥಳೀಯ ಗ್ರಾಮ ಪಂಚಾಯ್ತಿ ಆಡಳಿತದ ಗಮನಕ್ಕೆ ತಂದರೂ ಯಾವುದೇ ಪರಿಹಾರ ದೊರಕಿಲ್ಲ. ಈ ಹಿಂದೆ ಜಿಲ್ಲಾ ಪಂಚಾಯ್ತಿ ಸಿಇಓರವರಿಗೂ ಮನವಿ ಮಾಡಿದ್ದರೂ ಇಲ್ಲಿಯವರೆಗೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ನೀರಿನ ಅಭಾವದಿಂದ ತೀವ್ರ ತೊಂದರೆ ಎದುರಿಸುತ್ತಿದ್ದೆವೆ. ವಿವಿಧೆಡೆಯಿಂದ ನೀರು ಹೊತ್ತು ತರುವಂತಾಗಿದೆ. ವಯಸ್ಸಾದವರು, ಹೆಣ್ಣು ಮಕ್ಕಳ ಪಾಡು ಹೇಳತೀರದಾಗಿದೆ. ನಮ್ಮ ಗೋಳು ಕೇಳುವವರ್ಯಾರು ಇಲ್ಲದಂತಾಗಿದೆ. ಅಧಿಕಾರಿಗಳ್ಯಾರು ಸಮಸ್ಯೆಗೆ ಸ್ಪಂದಿಸುವ ಪ್ರಯತ್ನ ನಡೆಸುತ್ತಿಲ್ಲ. ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.
ಈ ಕಾರಣದಿಂದ ಹೊಸ ಪೈಪ್‍ಲೈನ್ ಅಳವಡಿಸಿ, ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಉಗ್ರ ಸ್ವರೂಪದ ಹೋರಾಟ ನಡೆಸುವುದು ಅನಿವಾರ್ಯವಾಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಅರುಣ್, ಪ್ರವೀಣ್, ಶಾಂತಮ್ಮ, ಪರಶುರಾಮ, ಶೋಭಾ ಸೇರಿದಂತೆ ಮೊದಲಾದವರಿದ್ದರು.

Leave a Comment