ಕುಡಿದು ಗಲಾಟೆ ಮಾಡುತ್ತಿದ್ದ ಅಣ್ಣನನ್ನು ಕೊಂದ ತಮ್ಮ

ಬೆಂಗಳೂರು, ಸೆ. ೭- ಕುಡಿದು ಬಂದು ಪ್ರತಿದಿನ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಅಣ್ಣನನ್ನು ರೊಚ್ಚಿಗೆದ್ದ ತಮ್ಮ ಕತ್ತು ಕೂಯ್ದು ಕೊಲೆ ಮಾಡಿರುವ ದುರ್ಘಟನೆ ಕೋಣನಕುಂಟೆಯ ಚುಂಚನಘಟ್ಟದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಟಿವಿ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವಿನಯ್ (25) ನನ್ನು ಚಾಕುವಿನಿಂದ ಕತ್ತು ಕೂಯ್ದು ಕೊಲೆ ಮಾಡಿದ ಆತನ ತಮ್ಮ ಸಂಜಯ್ (21)ನನ್ನು ಪೊಲೀಸರು ಬಂಧಿಸಿದ್ದಾರೆ.
ಕುಡಿತದ ಚಟ ಅಂಟಿಸಿಕೊಂಡಿದ್ದ ವಿನಯ್ ಪ್ರತಿದಿನ ರಾತ್ರಿ ಕುಡಿದುಬಂದು ಗಲಾಟೆ ಮಾಡುತ್ತಾ ತಾಯಿ ಮತ್ತು ತಮ್ಮನನ್ನು ನೆಮ್ಮದಿಯಾಗಿರಲು ಬಿಡುತ್ತಿರಲಿಲ್ಲ. ಇದರಿಂದ ಬೇಸತ್ತ ಸಂಜಯ್ ಹಲವು ಬಾರಿ ಅಣ್ಣನಿಗೆ ತಿಳಿಹೇಳಿ ಸಂಬಂಧಿಕರಿಂದ ಬುದ್ಧಿ ಹೇಳಿಸಿದ್ದರೂ ವಿನಯ್‌ನ ವರ್ತನೆ ಸರಿಯೋಗಿರಲಿಲ್ಲ.
ಕುಡಿದು ಬಂದ ವಿನಯ್ ಜತೆ ಹಲವು ಬಾರಿ ಸಂಜಯ್ ಜಗಳವಾಡಿದ್ದ. ರಾತ್ರಿ 10ರ ವೇಳೆ ಕುಡಿದು ಬಂದು ವಿನಯ್ ಜಗಳ ಮಾಡುತ್ತಿದ್ದಾಗ ತಾಯಿಯನ್ನು ಕೊಠಡಿಯೊಳಕ್ಕೆ ಕಳುಹಿಸಿ ಸಂಜಯ್ ಹೊರಬರದಂತೆ ಚಿಲಕ ಹಾಕಿದ್ದಾನೆ.
ಜಗಳ ಮಾಡುತ್ತಿದ್ದ ವಿನಯ್‌ನನ್ನು ಚಾಕುವಿನಿಂದ ಕತ್ತು ಕೂಯ್ದು ಕೊಲೆ ಮಾಡಿದ್ದು, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದಾವಿಸಿದ ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿ ಸಂಜಯ್‌ನನ್ನು ಬಂಧಿಸಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.
ಟಿಟಿಯಡಿ ಮಲಗಿ ಸಾವು
ಕೋಣನಕುಂಟೆಯ ಮೀನಾಕ್ಷಿ ಲೇಔಟ್‌ನ ಬಿ.ಜಿ. ರಸ್ತೆಯಲ್ಲಿ ನಿಲ್ಲಿಸಿದ್ದ ಟೆಂಪೋ ಟ್ರಾವೆಲರ್ (ಟಿಟಿ) ಕೆಳಗೆ ಕಂಠಪೂರ್ತಿ ಕುಡಿದು ಆಂಧ್ರ ಮೂಲದ ಸುಬ್ರಮಣಿ (35) ಎಂಬುವವರು ಮಲಗಿದ್ದಾರೆ.
ಸುಬ್ರಮಣಿ ಮಲಗಿರುವುದನ್ನು ಗಮನಿಸದೆ ಚಾಲಕ ವೆಂಕಟೇಶ್ ನಿನ್ನೆ ರಾತ್ರಿ 10ರ ವೇಳೆ ಟೆಂಪೋ ಚಲಾಯಿಸಿದ್ದು, ಅದರಡಿ ಸಿಕ್ಕ ಸುಬ್ರಮಣಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆಂಧ್ರದಿಂದ ರಸ್ತೆ ಕೆಲಸಕ್ಕಾಗಿ ಸುಬ್ರಮಣಿ ಅವರು ಬಂದಿದ್ದರು. ಪ್ರಕರಣ ದಾಖಲಿಸಿರುವ ಕೋಣನಕುಂಟೆ ಪೊಲೀಸರು, ಟಿಟಿ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Comment