ಕುಟುಂಬ ಉಳಿಸಿಕೊಳ್ಳಲು ಅದೆಷ್ಟು ಸುಳ್ಳು- ಜೇಟ್ಲಿ

ನವದೆಹಲಿ, ಫೆ 12- ಮುಳುಗುತ್ತಿರುವ ಕುಟುಂಬವನ್ನು ಉಳಿಸಿಕೊಳ್ಳುವ ಸಲುವಾಗಿ ಅದೆಷ್ಟು ಸುಳ್ಳು ಹೇಳುವ ಅಗತ್ಯವಿದೆ? ಈ ಸುಳ್ಳು ಹೇಳುವ ಪರಿಣಾಮ ದೊಡ್ಡದಾಗುತ್ತಾ ಇದೆ. “ಮಹಾಜೂಟ್ ಬಂಧನ್”ನ ಇತರ ಸಹವರ್ತಿಗಳಿಗೂ ಹಬ್ಬುತ್ತಿದ್ದೀರಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದಾರೆ.

ಉದ್ಯಮಿ ಅನಿಲ್ ಅಂಬಾನಿಗೆ ಮಧ್ಯವರ್ತಿ ರೀತಿಯಲ್ಲಿ ಪ್ರಧಾನಿ ಕಾರ್ಯ ನಿರ್ವಹಿಸಿದ್ದಾರೆ ಎಂದು ರಾಹುಲ್ ಗಾಂಧಿ ಮಾಡಿದ ಆರೋಪಕ್ಕೆ ಜೇಟ್ಲಿ ಹೀಗೆ ಪ್ರತಿಕ್ರಿಯಿಸಿದ್ದಾರೆ. ಎಲ್ಲಿ ರಫೇಲ್ ವ್ಯವಹಾರದಲ್ಲಿ ಸಾವಿರಾರು ಕೋಟಿ ರುಪಾಯಿಯ ಸಾರ್ವಜನಿಕ ಹಣ ಉಳಿತಾಯವಾಗಿದೆಯೋ ಅಂಥದ್ದರ ಬಗ್ಗೆ ದಿನವೂ ಸುಳ್ಳಿನ ಕಂತೆ ಹರಿಯಬಿಡಲಾಗಿದೆ ಎಂದು ಆರೋಪಿಸಿದ್ದಾರೆ.

ರಫೇಲ್ ಆಯ್ಕೆ ಮಾಡಿಕೊಂಡ ನಿರ್ಧಾರಕ್ಕೆ ಸಂಬಂಧಿಸಿದ ಹಾಗೆ ಸಿಎಜಿ ನೀಡಿದ ವರದಿಗೂ ಸುಳ್ಳು ಎನ್ನುತ್ತಿದ್ದಾರೆ. ಐದು ವರ್ಷದ ಹಿಂದೆ ಈಗಿನ ಸಿಎಜಿಯೇ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಆಗಿದ್ದರು. ಹಿರಿಯರಾಗಿದ್ದರಿಂದ ಒಂದು ಹಂತದಲ್ಲಿ ಅವರನ್ನು ಆರ್ಥಿಕ ಕಾರ್ಯದರ್ಶಿ ಮಾಡಲಾಯಿತು. ಯಾವುದೇ ವಿವಾದದ ಭಯವಿಲ್ಲದೇ ಈ ಮಾತನ್ನು ಹೇಳುತ್ತಿದ್ದೇನೆ: ರಫೇಲ್ ವ್ಯವಹಾರದ ಯಾವ ಕಾಗದ ಪತ್ರವೂ ಅವರನ್ನು ತಲುಪಿಲ್ಲ ಎಂದಿದ್ದಾರೆ.

ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಯಾವುದೇ ಬಗೆಯಲ್ಲಿ ರಕ್ಷಣಾ ವ್ಯವಹಾರದ ನಿರ್ಧಾರದಲ್ಲಿ ಅವರಿಗೆ ಸಂಬಂಧವಿಲ್ಲ ಎಂದು ತಮ್ಮ ಫೇಸ್ ಬುಕ್ ನಲ್ಲಿ ಅರುಣ್ ಜೇಟ್ಲಿ ಬರೆದುಕೊಂಡಿದ್ದಾರೆ.

Leave a Comment