ಕುಖ್ಯಾತ ರೌಡಿ ಕುಣಿಗಲ್ ಗಿರಿ ಬಂಧನ

ಬೆಂಗಳೂರು, ಆ. ೧- ದರೋಡೆಗೆ ಸಜ್ಜಾಗಿದ್ದ ಕುಖ್ಯಾತ ರೌಡಿ ಗಿರೀಶ್ ಅಲಿಯಾಸ್ ಕುಣಿಗಲ್ ಗಿರಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಾಮಾಕ್ಷಿಪಾಳ್ಯದ ರೌಡಿ ಕುಣಿಗಲ್ ಗಿರಿ (31) ಜತೆಗೆ ಆತನ ಸಹಚರರಾದ ಹನುಮಂತನಗರದ ರೌಡಿ ಶ್ರೀನಿವಾಸ್ ಅಲಿಯಾಸ್ ವಾಸು (30), ಕುಣಿಗಲ್‌ನ ಹೊಸೂರಿನ ವಿನೋದ್ (24), ಚೌಡೇಶ್ವರಿ ನಗರದ ಆನಂದ್ ಕುಮಾರ್ (28)ನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಿಂದ ಇನೋವಾ ಕಾರು, ಲಾಂಗ್, ಹಾಕಿ ಬ್ಯಾಟ್ ಇನ್ನಿತರ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಕುಣಿಗಲ್‌ನ ಹೊಸೂರಿನ ಕುಣಿಗಲ್ ಗಿರಿ, ದರೋಡೆ, ದರೋಡೆ ಯತ್ನ,ಕಳ್ಳತನ, ಸುಲಿಗೆ, ಅಪಹರಣ ಸೇರಿದಂತೆ 90ಕ್ಕೂ ಹೆಚ್ಚು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.
ಮತ್ತೊಬ್ಬ ರೌಡಿ ವಾಸು, ಕುಣಿಗಲ್‌ನ ಹೊನ್ನವಾಚನಹಳ್ಳಿಯವನಾಗಿದ್ದು, ಈತನ ವಿರುದ್ಧ ದರೋಡೆ, ದರೋಡೆ ಯತ್ನ, ಕಳವು, ಅಪಹರಣ, ಬೆದರಿಕೆ, ಸುಲಿಗೆ ಸೇರಿದಂತೆ 45 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ವಿನೋದ್ ಹಾಗೂ ಆನಂದ್ ಕುಮಾರ್ ಇತ್ತೀಚೆಗಷ್ಟೆ ಅಪರಾಧ ಲೋಕಕ್ಕೆ ಕಾಲಿಟ್ಟಿದ್ದು, ಕುಣಿಗಲ್ ಗಿರಿಯ ಜತೆ ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ಜಂಟಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ತಿಳಿಸಿದ್ದಾರೆ.
ಕುಣಿಗಲ್ ರವಿಯು ಇತ್ತೀಚೆಗೆ ಉದ್ಯಮಿ ಮಲ್ಲಿಕಾರ್ಜುನಯ್ಯ ಎಂಬುವರಿಗೆ 5 ಲಕ್ಷದ ಬೇಡಿಕೆಯಿಟ್ಟು, ಕೊಲೆ ಬೆದರಿಕೆ ಹಾಕಿದ್ದ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸಿಸಿಬಿ ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಯಗ್ಗನಹಳ್ಳಿ ಮುಖ್ಯರಸ್ತೆಯಲ್ಲಿ ನಿನ್ನೆ ರಾತ್ರಿ ದರೋ‌ಡೆಗೆ ಹೊಂಚು ಹಾಕಿ ಕುಳಿತಿದ್ದ ಗಿರಿ ಮತ್ತವನ ಸಹಚರರನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದರು.

Leave a Comment