ಕುಖ್ಯಾತ ದನಗಳ್ಳ ಸೆರೆ

ಈತ ೩೦ಕ್ಕೂ ಹೆಚ್ಚು ಪ್ರಕರಣಗಳ ಆರೋಪಿ
ಮಂಗಳೂರು, ಆ.೪- ಕೆಲದಿನಗಳ ಹಿಂದೆ ಸಂಚಲನ ಮೂಡಿಸಿದ್ದ ಪಾಂಡೇಶ್ವರ ಮಹಾಲಿಂಗೇಶ್ವರ ದೇವಾಲಯದ ದನಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಸಬಾ ಬೆಂಗ್ರೆ ನಿವಾಸಿ ಅಹಮ್ಮದ್ ಕಬೀರ್ ಅಲಿಯಾಸ್ ಬೆಂಗ್ರೆ ಕಬೀರ್(೩೦) ಎಂದು ಗುರುತಿಸಲಾಗಿದೆ. ಮಂಗಳೂರು ಪೊಲೀಸ್ ಕಮಿಷನರ್ ಅವರ ನಿವಾಸದ ಪಕ್ಕದಲ್ಲಿ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಹಿಂದೆ ನಡೆದ ಈ ದನಗಳ್ಳತನ ಪ್ರಕರಣ ನಗರದ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿತ್ತು. ಈ ಬಗ್ಗೆ ಭಾರೀ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಈ ಘಟನೆಯ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿ ಅಬ್ದುಲ್ ಕಬೀರ್ ಯಾನೆ ಪಾರಿವಾಳ ಕಬೀರ್ ಎಂಬಾತನನ್ನು ಇತ್ತೀಚೆಗೆ ಬಂಧಿಸಿದ್ದರು.
ಆತನಿಂದ ಕಳ್ಳತನ ಮಾಡಿದ ೨ ದನ ಹಾಗೂ ಕರುವನ್ನು ಸಾಗಾಟ ಮಾಡಲು ಉಪಯೋಗಿಸಿದ ಬಿಳಿ ಬಣ್ಣದ ಕಾರನ್ನು ಸ್ವಾದೀನಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಕುಖ್ಯಾತ ದನಗಳ್ಳ ಅಹಮ್ಮದ್ ಕಬೀರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಈ ಹಿಂದೆ ದನಕಳ್ಳತನಕ್ಕೆ ಸಂಬಂಧಪಟ್ಟಂತೆ ಉಡುಪಿ ಜಿಲ್ಲೆಯ ಕಾರ್ಕಳ ನಗರ, ಕಾರ್ಕಳ ಗ್ರಾಮಾಂತರ ಠಾಣೆ ಹಾಗೂ ಮಂಗಳೂರು ನಗರದ ಬಜ್ಪೆ, ಉಳ್ಳಾಲ, ಕೊಣಾಜೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆಗಳಲ್ಲಿ ೧೩ ಪ್ರಕರಣ, ಪಣಂಬೂರು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ಸೇರಿದಂತೆ ಒಟ್ಟು ೧೪ ಪ್ರಕರಣ ದಾಖಲಾಗಿವೆ. ಈತ ಈ ಹಿಂದೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕೈರಂಗಳ ಪುಣ್ಯಕೋಟಿ ಗೋಶಾಲೆಯಿಂದ ದನ ಕಳ್ಳತನ ಮಾಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದನು ಎಂದು ಹೇಳಲಾಗಿದೆ.

Leave a Comment