ಕುಖ್ಯಾತ ಕಳ್ಳ ಕಿಟಕಿ ಮಂಜನ ಸೆರೆ

ಬೆಂಗಳೂರು, ಆ. ೧೦- ವಾಹನ ಕಳವು ಮಾಡುತ್ತಿದ್ದಲ್ಲದೆ ಕಿಟಕಿ ಮೂಲಕ ಕೈಹಾಕಿ ಚಿನ್ನಾಭರಣ, ಮೊಬೈಲ್‌ಗಳನ್ನು ದೋಚಿ ಪರಾರಿಯಾಗುತ್ತಿದ್ದ ಕಿಟಕಿ ಮಂಜ ಸೇರಿ ಇಬ್ಬರನ್ನು ಬಂಧಿಸಿರುವ ದಕ್ಷಿಣ ವಿಭಾಗದ ಪೊಲೀಸರು ಎರಡೂವರೆ ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಸರಹಳ್ಳಿಯ ಮಂಜುನಾಥ ಅಲಿಯಾಸ್ ಕಿಟಕಿ ಮಂಜ (26), ಮುನೇಶ್ವರ ಬ್ಲಾಕ್‌ನ ಗುರು ಅಲಿಯಾಸ್ ಫ್ಲವರ್ (24) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ 8 ಗ್ರಾಂ ತೂಕದ 2 ಚಿನ್ನದ ಸರಗಳು, 4 ಮೊಬೈಲ್‌ಗಳು, ಹೋಂಡಾ ಶೈನ್ ಸ್ಕೂಟರ್‌ನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯ ಬಂಧನದಿಂದ 3 ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಡಿಸಿಪಿ ಡಾ. ಶರಣಪ್ಪ ಅವರು ತಿಳಿಸಿದ್ದಾರೆ.

ಆರೋಪಿಗಳು ಮನೆ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ನಕಲಿ ಕೀ ಬಳಸಿ ಕಳವು ಮಾಡುತ್ತಿದುದ್ದಲ್ಲದೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಿಟಕಿ ಮೂಲಕ ಕೈ ಹಾಕಿ ಚಿನ್ನ, ಮೊಬೈಲ್,ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದರು.

ಗಿರಿನಗರದಲ್ಲಿ ನಡೆದಿದ್ದ ಕಿಟಕಿ ಮೂಲಕ ಕಳವು ಪ್ರಕರಣವೊಂದನ್ನು ದಾಖಲಿಸಿದ ಗಿರಿನಗರ ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿ ಕಳವು ಮಾಲುಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.

Leave a Comment