ಕುಖ್ಯಾತನಾಗಲು ಸೇಠ್ ಹತ್ಯೆಗೆ ಫರಾನ್ ಯತ್ನ

ಮೈಸೂರು, ನ ೧೯- ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಕಾಂಗ್ರೆಸ್ ಮುಖಂಡ ತನ್ವೀರ್ ಸೇಠ್ ಹತ್ಯೆ ಯತ್ನ ಪ್ರಕರಣದ ಹೆಜ್ಜೆ ಜಾಡನ್ನು ಬೆನ್ನತ್ತಿರುವ ಪೊಲೀಸರಿಗೆ ಆಘಾತಕಾರಿ ಅಂಶಗಳು ಲಭ್ಯವಾಗಿದೆ.
ಹತ್ಯೆಗೆ ಯತ್ನ ನಡೆಸಿ ಬಂಧನಕ್ಕೊಳಗಾಗಿರುವ ಫರಾನ್ ಸ್ನೇಹಿತರನ್ನು ಪೊಲೀಸರು ವಿಚಾರಣೆಗೆ ಗುರಿಪಡಿಸಿದ ವೇಳೆ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.
ಮದುವೆ ಸಮಾರಂಭಕ್ಕೆ ತೆರಳಿದ ತನ್ವೀರ್ ಸೇಠ್ ಮೇಲೆ ಆರೋಪಿ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಹಲ್ಲೆ ನಡೆಸಿದ್ದ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫರಾನ್ ಸ್ನೇಹಿತರನ್ನು ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದಾರೆ. ಗಣ್ಯರನ್ನು ಹತ್ಯೆ ಮಾಡಿ ಹೆಸರು ಮಾಡುತ್ತೇನೆ ಎಂಬ ಸ್ಫೋಟಕ ಅಂಶವನ್ನು ಆಪ್ತರು ಮತ್ತು ಗೆಳೆಯರೊಂದಿಗೆ ಹೇಳಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸ್ ಫರಾನ್ ಜೊತೆಗೆ ಫೋಟೋದಲ್ಲಿ ಗುರುತಿಸಿಕೊಂಡಿದ್ದ ಸ್ನೇಹಿತರನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಫರಾನ್‌ಗೆ ಹೆಸರು ಮಾಡುವ ಹುಚ್ಚು ಹಿಡಿದಿತ್ತು. ವಿಐಪಿ ಯೊಬ್ಬರನ್ನು ಹತ್ಯೆ ಮಾಡಿ ಖ್ಯಾತಿ ಯಾಗುತ್ತೇನೆ ಎಂದು ಫರಾನ್ ಹೇಳಿದ ವಿಷಯವನ್ನು ಸ್ನೇಹಿತರು ಬಹಿರಂಗಪಡಿಸಿದ್ದಾರೆ. ಆದರೆ ಆ ಗಣ್ಯ ವ್ಯಕ್ತಿ ಯಾರು ಯಾವಾಗ ಹತ್ಯೆ ಮಾಡುತ್ತೇನೆ ಎಂಬ ವಿಷಯವನ್ನು ತಿಳಿಸಿರಲಿಲ್ಲ ಎಂದು ಪೊಲೀಸರಿಗೆ ಸ್ನೇಹಿತರು ಮಾಹಿತಿ ನೀಡಿದ್ದಾರೆ.
ಆತ ತಮಾಷೆಗೆ ಹೇಳುತ್ತಿದ್ದಾನೆ ಎಂದು ಭಾವಿಸಿದ್ದೇವು, ಆದರೆ ಭಾನುವಾರ ರಾತ್ರಿ ತನ್ವೀರ್ ಸೇಠ್ ಮೇಲಿನ ಹತ್ಯೆ ಯತ್ನ ಕಂಡು ನಮಗೂ ಭಯವಾಗಿದೆ ಎಂದು ಪೊಲೀಸರ ಬಳಿ ಅಲವತ್ತುಕೊಂಡಿದ್ದಾರೆ.
ಭಾನುವಾರ ರಾತ್ರಿ ಬನ್ನಿ ಮಂಟಪದ ಸಮೀಪ ತನ್ವೀರ್ ಸೇಠ್ ತಮ್ಮ ಆತ್ಮೀಯ ಸ್ನೇಹಿತನ ಮಗನ ವಿವಾಹದ ಬೀಗರ ಊಟಕ್ಕೆ ತೆರಳಿದ ವೇಳೆ ಫರಾನ್ ಏಕಾ ಏಕಿ ತನ್ವೀರ್ ಸೇಠ್ ಮೇಲೆ ಚಾಕುವಿನಿಂದ ಕುತ್ತಿಗೆ ಭಾಗಕ್ಕೆ ಇರಿದು ಪರಾರಿಯಾಗುತ್ತಿದ್ದ ವೇಳೆ ಆರೋಪಿಯನ್ನು ಸ್ಥಳೀಯರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈಗ ತನ್ನೀರ್ ಸೇಠ್ ಅವರು ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಂಡಿದ್ದಾರೆ.
ಫರಾನ್ ಕುಟುಂಬ ಪರಾರಿ
ಇದೇ ವೇಳೆ ಪ್ರಕರಣದ ತನಿಖೆಯನ್ನು ಪೊಲೀಸರು ಬಿರುಸುಗೊಳಿಸಿದ ಬೆನ್ನಲ್ಲೇ ಫರಾನ್ ಕುಟುಂಬ ಸದಸ್ಯರು ರಾತ್ರೋ ರಾತ್ರಿ ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾರೆ.
ನಿನ್ನೆ ತಡರಾತ್ರಿ ತಂದೆ, ತಾಯಿ ಮತ್ತು ಸಹೋದರಿಯೊಂದಿಗೆ ಗೌಸಿಯಾ ನಗರದಲ್ಲಿ ವಾಸವಿದ್ದ ಕುಟುಂಬಸ್ಥರು ಮನೆ ಖಾಲಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರನ್ನು ಪೊಲೀಸರು ವಿಚಾರಣೆಗೆ ಗುರಿಪಡಿಸಲಿದೆ. ಇದರಿಂದ ಮನೆ ಬಿಟ್ಟು ಪರಾರಿಯಾಗಿದೆ ಎಂದು ಹೇಳಲಾಗಿದೆ.

Leave a Comment