ಕುಂಭ ಮಾಸ ಪೂಜೆಗಾಗಿ ತೆರೆಯಲಿರುವ ಶಬರಿಮಲೆ ಎಲ್ಲೆಡೆ ಬಿಗಿ ಭದ್ರತೆ

ತಿರುವನಂತಪುರ, ಫೆ ೧೨- ಮಕರ ಸಂಕ್ರಾಂತಿ ಜ್ಯೋತಿ ಬಳಿಕ ಕುಂಭ ಮಾಸ ಪೂಜೆ ಹಿನ್ನೆಲೆಯಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲನ್ನು ಇಂದು ಸಂಜೆ ತೆರೆಯಲಾಗುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಕುಂಭ ಮಾಸ ಪೂಜೆಗಾಗಿ ಇಂದಿನಿಂದ ಐದು ದಿನಗಳ ಕಾಲ ದೇವಾಲಯ ತೆರೆದಿರಲಿದ್ದು, ಫೆ.೧೭ರಂದು ಮತ್ತೆ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ. ಈ ಐದು ದಿನಗಳ ಅವಧಿಯಲ್ಲಿ ಕಲಾ ಅಭಿಷೇಕ, ಸಹಸ್ರ ಕಲಶ ಸೇರಿ ಅನೇಕ ಕಾರ್ಯಕ್ರಮಗಳು ನಡೆಯಲಿವೆ.

ಕಳೆದ ಬಾರಿ ಕೆಲ ಮಹಿಳೆಯರು ದೇವಾಲಯ ಪ್ರವೇಶಿಸಿದ್ದರು. ಈ ವೇಳೆ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಈಗ, ಮತ್ತೆ ಕೆಲ ಮಹಿಳೆಯರು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಆಗಮಿಸಲು ಸಿದ್ಧತೆ ನಡೆಸಿದ್ದಾರೆ. ಇದನ್ನು ವಿರೋಧಿಸಿ ಆರ್‌ಎಸ್‌ಎಸ್ ಸೇರಿ ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಶಬರಿಮಲೆ ದೇವಾಲಯದ ಸುತ್ತಮುತ್ತ ಕೆಲ ನಿರ್ಬಂಧಗಳನ್ನು ಹೇರಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಿಂದು ಹಾಗೂ ಕನಕ ದುರ್ಗಾ ಹೆಸರಿನ ಮಹಿಳೆಯರು ಈ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದರು. ಈ ವೇಳೆ ದೇವಾಲಯದ ಬಾಗಿಲು ಹಾಕಿ ಶುದ್ಧೀಕಾರ್ಯ ನಡೆಸಲಾಗಿತ್ತು. ಇದಕ್ಕೆ ಎಲ್ಲ ಕಡೆಗಳಿಂದ ಟೀಕೆಗಳು ವ್ಯಕ್ತವಾಗಿದ್ದವು.

ಮಹಿಳೆಯರು ದೇಗುಲ ಪ್ರವೇಶಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳದಲ್ಲಿ ಹಿಂಸಾಚಾರ ಕೂಡ ನಡೆದಿತ್ತು. ಸಿಪಿಐಎಂ ಶಾಸಕ ಎನ್ ಶ್ಯಾಮ್ಸೀರ್ ಅವರ ಮನೆಯ ಮೇಲೆ ದುಷ್ಕರ್ಮಿಗಳು ಬಾಂಬ್ ದಾಳಿ ನಡೆಸಿದ್ದರು. ಇದರ ಹಿಂದೆ ಆರ್‌ಎಸ್‌ಎಸ್  ಕೈವಾಡವಿದೆ ಎಂದು ಸಿಪಿಐಎಂ ಆರೋಪಿಸಿದೆ.

Leave a Comment