ಕಿವೀಸ್ ಸವಾಲಿಗೆ ಸಿದ್ಧ: ಕೊಹ್ಲಿ

ವೆಲ್ಲಿಂಗ್ಟನ್, ಫೆ ೧೯- ಏಕದಿನ ಸರಣಿಯಲ್ಲಿ ಸೋತು ಮುಖಭಂಗ ಅನುಭವಿಸಿದ ಟೀಂ ಇಂಡಿಯಾ ಇದೀಗ ಕಿವೀಸ್ ಸವಾಲು ಎದರಿಸಲು ಸಜ್ಜಾಗಿದೆ ಎಂದು ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಮೈದಾನದಲ್ಲಿ ಹೆಚ್ಚಿನ ಏಕಾಗ್ರತೆ ಹೊಂದುವ ಮೂಲಕ ಅತ್ಯುತ್ತಮ ಮಟ್ಟವನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಭಾರತ ತಂಡದ ಟಿ-೨೦ ಸರಣಿಯಲ್ಲಿ ೫-೦ ಅಂತರದಲ್ಲಿ ಆತಿಥೇಯ ನ್ಯೂಜಿಲೆಂಡ್ ಎದುರು ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಬಳಿಕ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಿವೀಸ್ ಎದುರು ೦-೩ ಅಂತರದಲ್ಲಿ ಮುಖಭಂಗ ಅನುಭವಿಸಿತ್ತು.
ಸೀಮಿತ ಓವರ್‌ಗಳಲ್ಲಿ ಭಾರತ ತಂಡ ಫೀಲ್ಡಿಂಗ್ ವಿಭಾಗದಲ್ಲಿ ಹಲವು ವೈಫಲ್ಯಗಳನ್ನು ಅನುಭವಿಸಿತ್ತು. ಇದು ಏಕದಿನ ಸರಣಿಯ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಹಾಗಾಗಿ, ಇನ್ನೆರಡು ದಿನಗಳಲ್ಲಿ ಆರಂಭವಾಗುವ ಟೆಸ್ಟ್ ಸರಣಿಯಲ್ಲಿ ಭಾರತ ಫೀಲ್ಡಿಂಗ್ ವಿಭಾಗದಲ್ಲಿ ಸುಧಾರಣೆ ಕಂಡುಕೊಳ್ಳಬೇಕು ಎಂದು ಕೊಹ್ಲಿ ಸಲಹೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿರಾಟ್, ವಿಶ್ವದ ಯಾವುದೇ ತಂಡದ ವಿರುದ್ಧ ಸಮರ್ಥವಾಗಿ ಎದುರಿಸಬಹುದಾದ ರೀತಿಯಲ್ಲಿ ನಾವು ಫಿಟ್ನೆಸ್ ಹಾಗೂ ಏಕಾಗ್ರತೆ ಮಟ್ಟಗಳನ್ನು ಸಿದ್ದಪಡಿಸಿಕೊಂಡಿದ್ದೇವೆ. ಇದೇ ಅಂಶವನ್ನು ಟೆಸ್ಟ್ ಸರಣಿಯಲ್ಲಿ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ೩೬೦ ಅಂಕಗಳೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.

Leave a Comment