ಕಿವೀಸ್ ವಿರುದ್ಧ ದ್ವಿಶತಕ ಸಿಡಿಸಿ ವಿಶಿಷ್ಠ ದಾಖಲೆ ಮಾಡಿದ ರೂಟ್

ವೆಲ್ಲಿಂಗ್ಟನ್, ಡಿ 2 – ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ನ್ಯೂಜಿಲೆಂಡ್ ನೆಲದಲ್ಲಿ ವೃತ್ತಿ ಜೀವನದ ಮೂರನೇ ದ್ವಿಶತಕ ಸಿಡಿಸುವ ಮೂಲಕ ವಿಶಿಷ್ಠ ದಾಖಲೆಯನ್ನು ಮಾಡಿದ್ದಾರೆ.

ಟೆಸ್ಟ್ ಪಂದ್ಯವೊಂದರಲ್ಲಿ ನ್ಯೂಜಿಲೆಂಡ್ ಮಣ್ಣಿನಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಮೊದಲ ಪ್ರವಾಸಿ ನಾಯಕ ಎಂಬ ಸಾಧನೆಗೆ ಜೋ ರೂಟ್ ಭಾಜನರಾದರು. ಕಿವೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಈ ಸಾಧನೆಗೆ ಇಂಗ್ಲೆಂಡ್ ನಾಯಕ ಪಾತ್ರರಾದರು.

ಐದು ವಿಕೆಟ್ ಕಳೆದುಕೊಂಡು 269 ರನ್ ಗಳಿಂದ ನಾಲ್ಕನೇ ದಿನ ಪ್ರಥಮ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್‍ಗೆ ನಾಯಕ ಜೋ ರೂಟ್ ಅವರ ದಾಖಲೆಯ ದ್ವಿಶತಕ ನೆರವಾಯಿತು. ಇವರ ದ್ವಿಶತಕದ ಬಲದಿಂದ ಆಂಗ್ಲರು ಪ್ರಥಮ ಇನಿಂಗ್ಸ್ ನಲ್ಲಿ 476 ರನ್ ಗಳಿಸಿತು. ಅಲ್ಲದೇ ಆತಿಥೇಯರ ವಿರುದ್ಧ 101 ರನ್ ಮುನ್ನಡೆ ಗಳಿಸಿತು.

ನಾಲ್ಕನೇ ದಿನ ಜೋ ರೂಟ್ ಹಾಗೂ ಒಲ್ಲಿ ಪೋಪ್ ಜೋಡಿಯ ಬ್ಯಾಟಿಂಗ್ ಆಕರ್ಷಕವಾಗಿತ್ತು. ಈ ಜೋಡಿ ಮುರಿಯದ ಆರನೇ ವಿಕೆಟ್ ಗೆ 193 ರನ್ ಕಲೆ ಹಾಕಿತು. ಒಲ್ಲಿ ಪೋಪ್ 75 ರನ್ ಗಳಿಸಿ ವೃತ್ತಿ ಜೀವನದ ಚೊಚ್ಚಲ ಅರ್ಧ ಶತಕ ಬಾರಿಸಿದರು.

101 ರನ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ 34 ಓವರ್ ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದೆ. ಟಾಮ್ ಲಥಾಮ್ (18) ಹಾಗೂ ಜೀತ್ ರಾವಲ್ (0) ಅವರು ಬೇಗ ವಿಕೆಟ್ ಒಪ್ಪಿಸಿದರು. ಕೇನ್ ವಿಲಿಯಮ್ಸನ್ (37) ಹಾಗೂ ರಾಸ್ ಟೇಲರ್ (31) ಅವರು ವಿಕೆಟ್ ಕಾಯ್ದುಕೊಂಡಿದ್ದಾರೆ. ಈ ಜೋಡಿಯು ಮೂರನೇ ವಿಕೆಟ್‍ಗೆ 68 ರನ್ ಗಳಿಸಿತು. ಇನ್ನೂ, ಐದು ರನ್ ಹಿನ್ನಡೆಯಲ್ಲಿದೆ.

Leave a Comment