ಕಿರುತೆರೆಯಲ್ಲಿ ಹಿರಣ್ಯಕಶಿಪು ಘರ್ಜನೆ: ಮೋಡಿ ಮಾಡ್ತಾರ ನವೀನ್ ಕೃಷ್ಣ

ಹರಿ ಎಲ್ಲೆಲ್ಲೂ ಇರುವನು, ನನ್ನಲ್ಲಿ, ನಿನ್ನಲ್ಲಿ, ಎಲ್ಲೆಲ್ಲೂ ಇದ್ದಾನೆ…… ಈ ಕಂಬದಲ್ಲಿ….  ಈ ಕಂಬದಲ್ಲೂ ಇದ್ದಾನೆ….. ಅಬ್ಬಬ್ಬಾ ಭಕ್ತ ಪ್ರಹ್ಲಾದ ಚಿತ್ರದ ಈ ಡೈಲಾಗ್ ಯಾರಿಗೇ ಗೊತ್ತಿಲ್ಲ… ಈಗಲೂ ಈ ಚಿತ್ರ ನೋಡುವಾಗ ಈ ಡೈಲಾಗ್ ಕೇಳುತ್ತಿದ್ದಂತೆ ರೋಮಾಂಚನವಾಗುವುದು ಸಹಜ…. ಅಂತಹ ಅದ್ಭುತ ಹಿರಣ್ಯ ಕಶಿಪು ಪಾತ್ರಕ್ಕೆ ಡಾ.ರಾಜ್‌ಕುಮಾರ್ ಅವರು ಜೀವ ತುಂಬಿ ಅಭಿನಯಿಸಿದ್ದರು. ಇದೀಗ ಕಿರುತೆರೆ ಮೇಲೂ ಹಿರಣ್ಯಕಶಿಪು ಘರ್ಜನೆ ಶುರುವಾಗಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪೌರಾಣಿಕ ಕಥಾಹಂದರದ ‘ಶ್ರೀ ವಿಷ್ಣು ದಶಾವತಾರ’ ಧಾರಾವಾಹಿಯಲ್ಲಿ ನರಸಿಂಹಾವತಾರಕ್ಕೆ ವೇದಿಕೆ ಸಜ್ಜಾಗಿದ್ದು, ನಟ, ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಕಲಾವಿದನವೀನ್ ಕೃಷ್ಣ, ಈಗ ಹಿರಣ್ಯಕಶಿಪುನಾಗಿ ಹೇಗೆ ಘರ್ಜಿಸಲಿದ್ದಾರೆ ಎಂಬು ಕೌತುಕ ಹೆಚ್ಚಿದೆ. ಡಾ.ರಾಜ್‌ಕುಮಾರ್‌ಅವರ ಆ ರಾಕ್ಷಸ ನಡಿಗೆ, ಬೆಂಕಿಯುಗುಳುವ ಕಣ್ಣುಗಳು, ಕಂಚಿನ ಕಂಠದಂತಹ ಧ್ವನಿ, ಹರಿಯನ್ನೇ ಕೊಲ್ಲುತ್ತೇನೆಎಂಬ ಆ ಹಠ, ಅಹಂಕಾರ.. ಹೇಗೆ ಮೂಡಿಬರಲಿದೆ ಎಂಬುದು ಒಂದೆಡೆಯಾದರೇ ನವೀನ್ ಕೃಷ್ಣ ಅವರದೇಹದಾರ್ಢ್ಯತೆ, ಉಗ್ರ ನೋಟ ಎಲ್ಲಾವು ಪಾತ್ರಕ್ಕೆ ತಕ್ಕಂತಿದೆ.

naveen-krishna3

ಹಿರಣ್ಯಕಶಿಪು ಎಂದ ಕೂಡಲೇ ರಾಜಣ್ಣ ನೆನಪಿಗೆ ಬರ್‍ತಾರೆ, ಅಂತಹ ಪಾತ್ರಕ್ಕಾಗಿ ಹೇಗಿದೆ ತಯಾರಿ?

ಜೀ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹಾಗೂ ನಿರ್ದೇಶಕರು ಮೊದಲು ಇಂತಹ ಒಂದು ಪಾತ್ರಕ್ಕಾಗಿ ಆಯ್ಕೆ ಮಾಡಿದಾಗ ಒಂದು ಭಯ ಇತ್ತು. ಅಲ್ಲದೇ ಇತರೆ ಕೆಲಸಗಳಲ್ಲಿ ನಾನು ಬ್ಯುಸಿ ಇದ್ದೆ, ಹೇಗೂ ಸಮಯ ಹೊಂದಿಸಿಕೊಂಡು ಬಹಳ ಹುಮ್ಮಸ್ಸಿನಿಂದಲೇ ಪಾತ್ರ ಒಪ್ಪಿಕೊಂಡೆ… ಹಿರಣ್ಯಕಶಿಪು ಅಂದ್ರನೇ ಕಣ್ಣು ಮುಚ್ಚಿದ್ರೂ, ಕಣ್ಣು ತೆಗೆದ್ರೂ ರಾಜಣ್ಣ ಅವರು ಕಣ್ ಮುಂದೆ ಬರ್‍ತಾರೆ… ಅವರ ಅಭಿನಯದಲ್ಲಿ ೧ ಪಸೆಂಟ್ ಕೂಡ ಮಾಡೋಕೆ ಆಗಲ್ಲ. ಈಗಾಗಲೇ ಅವರು ಇತಿಹಾಸ ನಿರ್ಮಿಸಿರುವ ಪಾತ್ರ ಅದು ಹೋಲಿಕೆ ಮಾಡೊಕೂ ಆಗಲಿ, ಅವರ ಹತ್ತಿರ ಸುಳಿಯೋಕ್ಕೂ ಆಗಲ್ಲ…. ಅವರ ಅಭಿನಯ ನೋಡಿಯೇ ಪಾತ್ರಕ್ಕಾಗಿ ತಯಾರಿ ಮಾಡಿಕೊಂಡೇ, ಧಾರಾವಾಹಿಯಲ್ಲಿ ಈ ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದೇನೆ.

ಭಕ್ತಪ್ರಹ್ಲಾದ ಚಿತ್ರವನ್ನು ಮತ್ತೆ ಎಷ್ಟು ಸಾರಿ ನೋಡಿದ್ರಿ?

ಈಗಾಗಲೇ ಭಕ್ತಪ್ರಹ್ಲಾದ ಸಾವಿರಾರು ಭಾರಿ ನೋಡಿರಬಹುದು. ಧಾರಾವಾಹಿಯಲ್ಲೂ ಬಹಳ ವಿಶೇಷವಾಗಿ ಹಿರಣ್ಯಕಶಿಪು ಪಾತ್ರವನ್ನು ಚಿತ್ರೀಕರಿಸುತ್ತಿದ್ದಾರೆ. ಹಾಗಾಗಿ ಮತ್ತೆ ಪೂರ್ತಿ ಚಿತ್ರ ನೋಡಕ್ಕಾಗಿಲ್ಲ, ಮುಖ್ಯ ಸನ್ನಿವೇಶವನ್ನು ಮತ್ತೆ ಮತ್ತೆ ನೋಡಿ ಅಭಿನಯಿಸಿದ್ದೇನೆ.

naveen-krishna1ಆಧುನಿಕ ತಂತ್ರಜ್ಞಾನದಲ್ಲಿ ಹೇಗಿದೆ ಚಿತ್ರೀಕರಣ?

ಅಂದಿನ ಭಕ್ತಪ್ರಹ್ಲಾದ ಚಿತ್ರಕ್ಕಾಗಿ ಎಲ್ಲವು ನೈಸರ್ಗಿಕವಾಗಿ ಚಿತ್ರೀಕರಿಸಲಾಗಿತ್ತು. ಕಾಡು ಮೇಡುಗಳಲ್ಲಿ ನಿಜವಾಗಿಯೂ ಚಿತ್ರೀಕರಣ ಮಾಡಿದ ಹೆಗ್ಗಳಿಕೆ ಚಿತ್ರತಂಡಕ್ಕಿದೆ. ಇಂದು ಎಲ್ಲವು ಗ್ರಾಫಿಕ್‌ಮಯ… ನಾವು ಗ್ರೀನ್ ಮ್ಯಾಟ್ ಬಳಸಿ ಚಿತ್ರೀಕರಣ ಮಾಡುತ್ತಿದ್ದೇವೆ. ಅದರಲ್ಲೂ ನನ್ನ ಆರಂಭಿಕ ದೃಶ್ಯದಲ್ಲಿ ಆನೆಗಳ ಜೊತೆ ಕಾಳಗ ಮಾಡುವ ಸನ್ನಿವೇಶ ಇದೆ. ಇಂತಹ ಒಂದು ತಂತ್ರಜ್ಞಾನ ಯಾವ ಪೌರಾಣಿಕ ಧಾರಾವಾಹಿಯಲ್ಲೂ ಬಂದಿಲ್ಲ.

ಕಯಾದು ಆಗಿ ಅರ್ಚನಾ ಹಾಗೂ ಪ್ರಹ್ಲಾದನಾಗಿ ಅಜಿಂತ್ಯ ನಟನೆ ಹೇಗಿದೆ?

ನಮ್ಮ ಚಿತ್ರೀಕರಣದ ಸಮಯದಲ್ಲಿ ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಆಗ ನಾನು ಅರ್ಚನಾ ಅವರಿಗೆ ಯಶ್ ತಾಯಿ ಪಾತ್ರಧಾರಿ ಬಗ್ಗೆ ಮೆಚ್ಚುಗೆ ಮಾತು ಹೇಳುತ್ತಿದ್ದಾಗ.. ಆಗ ಅರ್ಚನಾ ಅವರು ಅದು ನಾನೇ ಸರ್ ಎಂದಾಗ ನನಗೆ ತುಂಬಾನೆ ಅಚ್ಚರಿ ಆಗಿದ್ದು ನಿಜ. ಕಯಾದು ಪಾತ್ರದಲ್ಲಿ ಅರ್ಚನಾ ತುಂಬಾ ಲಕ್ಷಣವಾಗಿ ಹಾಗೂ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಮ್ಮಿಬ್ಬರ ಕೆಮಿಸ್ಟಿ ಕೂಡ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇನ್ನು ಅವರ ನಟನೆ ಬಗ್ಗೆ ಯಾವುದೇ ಮಾತಿಲ್ಲ…. ಪುಟಾಣಿ ಅಜಿಂತ್ಯ ತುಂಬಾ ತರ್‍ಲೆ ಜೊತೆಗೆ ಆಗಾಧ ಪ್ರತಿಭೆಯ ಹುಡುಗ, ಪಾತ್ರಕ್ಕಾಗಿ ಅವನ ಪೋಷಕರು ತುಂಬಾ ಚೆನ್ನಾಗಿ ಆತನನ್ನು ಟ್ರೇನ್ ಮಾಡಿದ್ದಾರೆ.

ಶ್ರೀ ವಿಷ್ಣು ದಶಾವತಾರ ಧಾರಾವಹಿ ಬಗ್ಗೆ ನಿಮ್ಮ ಅಭಿಪ್ರಾಯ?

ಧಾರಾವಾಹಿ ತುಂಬಾ ಗುಣಮಟ್ಟ ಹಾಗೂ ಅದ್ಧೂರಿತನದಿಂದ ಕೂಡಿದೆ. ಜನರು ವಿಷ್ಣು- ಲಕ್ಷ್ಮಿ ಪಾತ್ರಧಾರಿಗಳ ಅಭಿನಯಕ್ಕೆ ಮಾರು ಹೋಗಿದ್ದಾರೆ. ಕನ್ನಡ ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಪ್ರಸಾರವಾಗುತ್ತಿರುವುದರಿಂದ ಬಹಳ ನಿರೀಕ್ಷೆ ಇದೆ.

ನಿರ್ದೇಶಕರ ಬಗ್ಗೆ ನಿಮ್ಮ ಅನಿಸಿಕೆ?

ನಿರ್ದೇಶಕ ಸಂತೋಷ್ ಬಾಗಲ್ ಅವರು ಮೂಲತಃ ಮುಂಬೈನವರು, ಕನ್ನಡವಾಗಲಿ, ತಮಿಳು ಆಗಲಿ ಗೊತ್ತಿಲ್ಲ, ಆದರೂ ತಮ್ಮನ್ನು ತಾವು ತುಂಬಾ ಚೆನ್ನಾಗಿ ತೊಡಗಿಸಿಕೊಂಡು ಅವರದೇ ಶೈಲಿಯಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಪದಗಳನ್ನು ಹಿಂದಿಗೆ ಭಾಷಾಂತರಿಸಿಕೊಂಡು ಹೊಸ ಹೊಸ ಪದಗಳ ಹುಡುಕಿ ಅಭಿನಯ ತೆಗೆಸುವ ಪರಿ ನಿಜಕ್ಕೂ ಅದ್ಭುತ. ಸ್ವತಃ ನನಗೆ ಒಂದು ಮಿನಿ ನಟನಾ ಶಾಲೆಗೆ ಹೋಗಿ ಬಂದ ಅನುಭವ ಆಗಿರುವುದು ನಿಜ.

naveen-krishnaಮುಂಬೈ ತಂತ್ರಜ್ಞರ ಬಗ್ಗೆ ಹೇಳಿ?

ಅಲ್ಲಿನ ತಂತ್ರಜ್ಞರು, ಇಲ್ಲಿನ ತಂತ್ರಜ್ಞರಿಗೆ ಅಂತಹ ವ್ಯತ್ಯಾಸ ಏನು ಇಲ್ಲ. ಇಲ್ಲಿ ಕಾರ್ಖಾನೆಯಂತೆ ಕೆಲಸ ಮಾಡುತ್ತಾರೆ, ಬಜೆಟ್ ಲೆಕ್ಕಚಾರದಲ್ಲೂ ಕೆಲಸಗಳು ನಡೆಯುತ್ತದೆ, ಇಂದು ಏನು ಮಾಡಬೇಕೆಂದು ಹಿಂದಿನ ದಿನವೇ ಪ್ಲಾನ್ ಆಗಿರುತ್ತದೆ. ಒಂದು ಏನೆಂದರೆ ಇಲ್ಲಿನಷ್ಟು ಮ್ಯಾನ್ ಪವರ್ ನಮ್ಮಲ್ಲಿ ಇಲ್ಲ ಅಷ್ಟೆ. ವಿಶೇಷ ಅಂದರೆ ನಮ್ಮ ಕನ್ನಡ ಕಲಾವಿದರು ಸಹ ಮುಂಬೈನಲ್ಲಿದ್ದು, ಅನೇಕ ಹಿಂದಿ ಹಾಗೂ ಕನ್ನಡ ಕಿರುತೆರೆ, ಬೆಳ್ಳಿತೆರೆಯಲ್ಲಿ ಕೆಲಸ ಮಾಡುತ್ತಿರುವುದು ಗಮನಾರ್ಹ.

ಜೀ ವಾಹಿನಿ ಬಗ್ಗೆ ಹೇಳಿ?

ನನಗೆ ಎರಡನೇ ಜನ್ಮ ನೀಡಿದ ತಾಯಿ ‘ಜೀ ವಾಹಿನಿ’  ನನ್ನ ಮೇಲೆ ನಂಬಿಕೆ ಕಳೆದ ಎರಡೂವರೆ ವರ್ಷಗಳಿಂದ ವಾಹಿನಿಯಲ್ಲಿ ನಿರ್ದೇಶಕನಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಿ ಬೆಂಬಲಿಸಿದೆ. ಒಂದು ರೀತಿಯಲ್ಲಿ ಜೀ ವಾಹಿನಿ ನನ್ನ ಇನ್ನೊಂದು ಮನೆ ಎಂದರೆ ತಪ್ಪಾಗಲಾರದು.

ಮುಂದಿನ ಯೋಜನೆಗಳ ಬಗ್ಗೆ ಹೇಳಿ?

ತುಂಬಾ ದಿನಗಳಿಂದ ಪ್ರಸಿದ್ಧ ಕವಿ ಸುಗ್ಗನಹಳ್ಳಿ ರುದ್ರಮೂರ್ತಿ ಶಾಸ್ತ್ರಿ ಅವರ ರಚನೆಯ ‘ಚಾಣಕ್ಯ ಕಾದಂಬರಿಯನ್ನು ಸಿನಿಮಾ ಹಾಗೂ ಧಾರಾವಾಹಿ ರೂಪದಲ್ಲಿ ತರಬೇಕೆಂಬ ಬಹುದೊಡ್ಡ ಕನಸಿದೆ. ಸುಮಾರು ೩ ಸಾವಿರ ಪುಟವುಳ್ಳ ಈ ಕಾದಂಬರಿಯಲ್ಲಿ ಉತ್ತರ ಭಾರತದ ಸೊಗಡುಗಳನ್ನು ಒಳಗೊಂಡಿದೆ. ಇದನ್ನು ತಯಾರಿ ಮಾಡಿಕೊಂಡು ಕನ್ನಡ ಪ್ರೇಕ್ಷಕರ ಮುಂದೆ ಇಡುವ ಆಸೆ ಇದೆ.

ಪ್ರೇಕ್ಷಕರಿಗೆ ನಿಮ್ಮ ಸಂದೇಶ?

ಹಿರಣ್ಯಕಶಿಪು ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದೇನೆ. ನಿನ್ನೆಯಿಂದ ಸಂಚಿಕೆ ಪ್ರಸಾರವಾಗುತ್ತಿದ್ದು, ಅಣ್ಣಾವ್ರ ನಟನೆಯಿಂದ ಸ್ಪೂರ್ತಿಗೊಂಡು ಈ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ. ಪ್ರೇಕ್ಷಕರ ಆಲೋಚನೆಗೆ ಮೋಸ ಮಾಡಲ್ಲ ಎಂಬ ವಿಶ್ವಾಸ ಇದೆ.

Leave a Comment