ಕಿರುತೆರೆಯಲ್ಲಿ ಡಬ್ಬಿಂಗ್ ಪೈಪೋಟಿ ಹವಾ ಪ್ರೇಕ್ಷಕರನ್ನು ಸೆಳೆಯಲು ಕಸರತ್ತು

ಬಿ.ಆರ್. ವಿಶ್ವನಾಥ್
ಕಿರುತೆರೆಯಲ್ಲಿ ಮತ್ತೆ ಪೈಪೋಟಿ ಆರಂಭವಾಗಿದೆ.ಆದರೆ ಹೊಸ ಹೊಸ ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ಬಿತ್ತರಿಸಿ ಈ ಪೈಪೋಟಿ ನಡೆಯುತ್ತಿಲ್ಲ. ಈ ಹಿಂದೆ ಕಿರುತೆರೆಯಲ್ಲಿ ಪ್ರಸಾರಗೊಂಡು ಜನಪ್ರಿಯ ಧಾರವಾಹಿಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ ಪ್ರಸಾರ ಮಾಡಿ ಪ್ರೇಕ್ಷಕರನ್ನು ಸೆಳೆಯಲು ಮುಂದಾಗಿವೆ.
ಕೊರೊನಾ ಸೋಂಕಿನ ತಡೆಗೆ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಕಿರುತೆರೆಯಲ್ಲಿ  ಪ್ರಸಾರವಾಗುತ್ರಿರುವ ಜನಪ್ರಿಯ ಕಾರ್ಯಕ್ರಮಗಳ ಶೂಟಿಂಗ್ ಸ್ತಬ್ದಗೊಂಡಿದ್ದು, ಒಂದಷ್ಟು ದಿನ ಪ್ರಸಾರವಾಗಿದ್ದ ಜನಪ್ರಿಯ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡಿತ್ತು.
ರಾಷ್ಟ್ರೀಯ ವಾಹಿನಿ ಡಿಡಿಯಲ್ಲಿ ಮಹಾಭಾರತ ಮತ್ತು ರಾಮಾಯಣ ಧಾರಾವಾಹಿಗಳನ್ನು ಮರು ಪ್ರಸಾರ ಮಾಡಿದ್ದೇ ತಡ ದೇಶಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ  ದೇಶದಲ್ಲಿ  ಏಳು ಕೋಟಿಗೂ ಹೆಚ್ಚು ಮಂದಿ ಈ ಪೌರಾಣಿಕ  ಧಾರಾವಾಹಿಗಳನ್ನು ವೀಕ್ಷಿಸಿದ್ದರು. ಈಗ ಶ್ರೀ ಕೃಷ್ಣ ಧಾರಾವಾಹಿ ಪ್ರಸಾರ ಮಾಡುತ್ತಿದೆ.ಇದರ ಬೆನ್ನಲ್ಲೇ ಈಗ ಹಳೆ ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ ಪ್ರಸಾರ ಮಾಡುತ್ತಿವೆ. ಸ್ಟಾರ್‌ ಪ್ಲಸ್ ನಲ್ಲಿ ಪ್ರಸಾರವಾಗಿದ್ದ ಮಹಾಭಾರತ ‌ಧಾರಾವಾಹಿಯನ್ನು  ಕನ್ನಡಕ್ಕೆ
ಡಬ್ಬಿಂಗ್ ಮಾಡಿ  ಸ್ಟಾರ್ ಸುವರ್ಣ ಕನ್ನಡದಲ್ಲಿ ಪ್ರಸಾರ ಮಾಡುತ್ತಿದೆ.ಹಸ್ತಿನಾಪುರದ ಶಂತನು ಮಹಾರಾಜನಿಂದ ಆರಂಭವಾಗಿ ಕುರುಕ್ಷೇತ್ರ ಯುದ್ಧದ  ಕಥೆಯನ್ನು 260 ಕಂತುಗಳಲ್ಲಿ ಪ್ರಸಾರವಾಗುತ್ತಿರುವ  ಈ ಧಾರಾವಾಹಿ ತಾಂತ್ರಿಕತೆ ಮತ್ತು ಗುಣಮಟ್ಟಕ್ಕೆ ಪ್ರಸಿದ್ಧಿಯಾಗಿತ್ತು. ಈಗ ಕನ್ನಡಕ್ಕೆ ಡಬ್ ಮಾಡಿ ಪ್ರಸಾರವಾಗುತ್ತಿದ್ದು ಈ ಅತ್ಯಂತ ಜನಪ್ರಿಯ ಪೌರಾಣಿಕ ಧಾರಾವಾಹಿಯಲ್ಲಿ ಬರುವ ಪಾತ್ರಗಳು, ಕನ್ನಡದ ಸಂಭಾಷಣೆಯನ್ನು  ಸವಿಯುವ ಸದಾವಕಾಶ ಕನ್ನಡಿಗರಿಗೆ ಪ್ರಾಪ್ತವಾಗಿದೆ.
ಇದರ ಜತೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಿದ್ದ ಮತ್ತೊಂದು ಜನಪ್ರಿಯವಾಗಿದ್ದ ಶ್ರೀ ಗುರು ರಾಘವೇಂದ್ರ ವೈಭವ ಧಾರಾವಾಹಿಯನ್ನು
ಮರು‌ ಪ್ರಸಾರ ಮಾಡುವ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಕಸರತ್ತು ನಡೆಸಿದೆ. ಮ‌ಂತ್ರಾಲಯ ಗುರುಗಳ ಕುರಿತ ಈ ಧಾರಾವಾಹಿಯನ್ನು  ಎಂ.ಎಸ್ ರಾಮಯ್ಯ ಮೀಡಿಯಾ ನಿರ್ಮಾಣ ಮಾಡಿತ್ತು.
ಈಗ ಜೀ ಕನ್ನಡ ವಾಹಿನಿಯಲ್ಲಿ 1980 ರಲ್ಲಿ ಇಡೀ ದೇಶದ ಮನಗೆದ್ದಿದ್ದ ಶಂಕರ್ ನಾಗ್ ನಿರ್ದೇಶನದ ಹಾಗೂ ಅಪಾರ ಜನಮೆಚ್ಚುಗೆಗೆ ಪಾತ್ರವಾಗಿತ್ತು.
ತಾನಾನ ತನ ತನನಾ ಟೈಟಲ್ ಟ್ರ್ಯಾಕ್ ಕೇಳಿದರೆ ಜನರು ಈಗಲೂ ಗುನುಗುತ್ತಾರೆ.ಅಂದರೆ ಅಷ್ಟೊಂದು ಜನ ಮನ್ನಣೆಗೆ ಪಾತ್ರವಾಗಿದ್ದ ಮಾಲ್ಗುಡಿ ಡೇಸ್ ಕನ್ನಡಕ್ಕೆ ಡಬ್ಬಿಂಗ್ ಮಾಡಿ ಪ್ರಸಾರ ಮಾಡಲಾಗುತ್ತಿದೆ.

da1
ಈ ಧಾರಾವಾಹಿಯು ರಾಷ್ಟ್ರೀಯ ದೂರದರ್ಶನದಲ್ಲಿ ಬಿತ್ತರಗೊಂಡಿತ್ತು.  ಲೇಖಕ ಹಾಗೂ ಹೆಸರಾಂತ ಕಾದಂಬರಿಕಾರ ಆರ್.ಕೆ. ನಾರಾಯಣ್
ಬರೆದಿರುವ ಕಥೆಯನ್ನು  ಧಾರಾವಾಹಿಯನ್ನಾಗಿ ನಿರ್ಮಿಸುವ ಹಕ್ಕನ್ನು ಶಂಕರ್ ನಾಗ್ ಅವರಿಗೆ ನೀಡಿದ್ದರು. ಟಿ.ಎಸ್.ನರಸಿಂಹನ್ ನಿರ್ಮಾಣದ ಈ ಧಾರಾವಾಹಿಯಲ್ಲಿ ಹೆಸರಾಂತ ನಟರಾದ ವಿಷ್ಣುವರ್ಧನ, ಅನಂತ್ ನಾಗ್, ಗಿರೀಶ್ ಕಾರ್ನಾಡ್, ಬಿ.ಜಯಶ್ರೀ ,ವೈಶಾಲಿ ಕಾಸರವಳ್ಳಿ, ಮಾಸ್ಟರ್ ಮಂಜುನಾಥ್ ಮುಂತಾದವರು ಅಭಿನಯಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಆಗುಂಬೆಯಲ್ಲಿ  ಈ ಧಾರಾವಾಹಿ ಚಿತ್ರೀಕರಣ ಮಾಡಲಾಗಿದೆ.
ಈ ಸುಂದರ ತಾಣ ಶಂಕರ್ ನಾಗ್ ಅವರಿಗೆ ಅಚ್ಚು ಮೆಚ್ಚಿನ ತಾಣ. ಕೆಲವೇ ವಾರಗಳಲ್ಲಿ ಅರ್.ಕೆ.ನಾರಾಯಣ್  ಅವರ ಮಾಲ್ಗುಡಿಯಾಗಿ ರೂಪಾಂತರಗೊಂಡಿತು. ಅಷ್ಡೇ ಅಲ್ಲ ನೂರಕ್ಕೂ ಹೆಚ್ಚು ನಟರು ಈ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಆದರೆ ಈ ಸುತ್ತಮುತ್ತಲ ಪ್ರದೇಶಗಳಲ್ಲಿ ಯಾವುದೇ ಹೋಟೆಲ್ ಇರಲಿಲ್ಲ.
ಅಂದಹಾಗೆ ಈ ಧಾರಾವಾಹಿಯಲ್ಲಿ  ಸ್ವಾಮಿ ಪಾತ್ರದಲ್ಲಿ ಅಭಿನಯಿಸಿರುವ ಮಂಜುನಾಥ್ ಗೆ ಆಗ ಒಂಭತ್ತು ವರ್ಷ.ಕನ್ನಡದ ಅತ್ಯುತ್ತಮ ನಟರ ಭೂಮಿಕೆಯಿರುವ ಈ ಧಾರಾವಾಹಿಯನ್ನು   ಕನ್ನಡಕ್ಕೆ ಡಬ್ಬಿಂಗ್ ಮಾಡಿ ವೀಕ್ಷಿಸಬೇಕೆಂಬಕನಸು ಈಗ ಈಡೇರಿದೆ ಎನ್ನುತ್ತಾರೆ ಮಂಜುನಾಥ್.
ಶಂಕರ್ ನಾಗ್ ಅವರು  39 ಕಂತುಗಳನ್ನು ನಿರ್ದೇಶಿಸಿದ್ದರು.  1990ರಲ್ಲಿ ರಸ್ತೆ ಅಪಘಾತದಲ್ಲಿ ಶಂಕರ್ ನಾಗ್ ಮೃತಪಟ್ಟಿದ್ದರು. ಆನಂತರ ಕವಿತಾ ಲಂಕೇಶ್  2003  ರಲ್ಲಿ ಮತ್ತೆ ಮಾಲ್ಗುಡಿ ಡೇಸ್ ಧಾರಾವಾಹಿ ಶೂಟಿಂಗ್ ಪುನರಾರಂಭಿಸಿ 18 ಕಂತುಗಳನ್ನು ನಿರ್ದೇಶಿಸಿದ್ದರು.
ಇನ್ನೂ ಉದಯ ಟಿವಿಯಲ್ಲಿ  ಮರು ಪ್ರಸಾರ ಕಾರ್ಯಕ್ರಮಗಳ ಜತೆಗೆ ತಮಿಳು ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ ಚಿತ್ರಗಳನ್ನು ಪ್ರಸಾರ ಮಾಡುತ್ತಿದೆ.
ಈಗಾಗಲೇ ಪ್ರಸಾರವಾಗುತ್ತಿದ್ದ ಸರಣಿ ಧಾರಾವಾಹಿಗಳ ಕಂತಿಲ್ಲದೆ  ಈಗ ಪ್ರಸಾರವಾಗಿರುವ ಧಾರಾವಾಹಿಗಳನ್ನೇ ಮರು ಪ್ರಸಾರ ಮಾಡಲಾಗುತ್ತಿದೆ. ಸಾಮಾಜಿಕ‌ ಅಂತರ ಕಾಯ್ದುಕೊಂಡು ಚಿತ್ರೀಕರಣಕ್ಕೆ  ಸರ್ಕಾರ ಅನುಮತಿ ನೀಡಿದೆ. ಆದರೆ ತಂತ್ರಜ್ಞರ ಕೊರತೆ ಕಾರಣ ಮೇ  25 ರಿಂದ ಚಿತ್ರೀಕರಣ ಮಾಡಲು ಧಾರಾವಾಹಿಗಳ ನಿರ್ದೇಶಕರು ಮುಂದಾಗಿದ್ದಾರೆ.ಚಿತ್ರೀಕರಣ ಪ್ರಾರಂಭವಾಗಿ ಅದು ಎಡಿಟಿಂಗ್ ಮಾಡಿ ಧಾರಾವಾಹಿಗಳು ಪ್ರಸಾರವಾಗಲು ಇನ್ನಷ್ಟು  ದಿನ ಸೀರಿಯಲ್ ಪ್ರಿಯರು ಕಾಯಲೇಬೇಕು. ರಾಜ್ಯದಲ್ಲಿ ಕೊರೊನಾ ಸೋಂಕು ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ. ಇದು ನಿಯಂತ್ರಣಕ್ಕೆ ಬಂದರೆ ಮಾತ್ರ ಎಲ್ಲವೂ ಸುಸೂತ್ರವಾಗಲಿದೆ.

Leave a Comment