ಕಿತ್ತೂರು ರಾಣಿ ಚೆನ್ನಮ್ಮ ಜನ್ಮ ಸ್ಥಳ ಅಭಿವೃದ್ಧಿ ಸಿಎಂ ಭರವಸೆ

ಬೆಂಗಳೂರು, ಅ. ೨೩- ಬೆಳಗಾವಿ ಜಿಲ್ಲೆಯ ಬೈಲವಂಗಲದಲ್ಲಿರುವ ವೀರರಾಣಿ ಕಿತ್ತೂರು ಚೆನ್ನಮ್ಮನವರ ಐತಿಹಾಸಿಕ ಸಮಾಧಿ ಸ್ಥಳ ಹಾಗೂ ಚೆನ್ನಮ್ಮನವರ ಜನ್ಮಸ್ಥಳವಾದ ಕಾಕತೀಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದಿಲ್ಲಿ ತಿಳಿಸಿದರು.
ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತ್ಯೋತ್ಸವ ಅಂಗವಾಗಿ ರವಿಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬೈಲವಂಗಲವದಲ್ಲಿರುವ ಐತಿಹಾಸಿಕ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ ಮಾಡಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿರುವುದರಿಂದ ಹೆಚ್ಚಿನ ಘೋಷಣೆ ಮಾಡುವುದು ಸೂಕ್ತವಲ್ಲ. ಮುಂದಿನ ದಿನಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರಿಗೆ ಗೌರವ ಸಲ್ಲಿಸಲು ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಕಿತ್ತೂರು ರಾಣಿ ಚೆನ್ನಮ್ಮನವರ ಧೈರ್ಯ, ಸಾಹಸಗಳು ಇಂದಿಗೂ ಮನೆ ಮಾತಾಗಿದೆ ಎಂದು ಅವರು ಹೇಳಿದರು.
ಕೂಡಲ ಸಂಗಮ ಲಿಂಗಾಯಿತ, ಪಂಚಮಶಾಲಿ, ಜಗದ್ಗುರು ಮಹಾಪೀಠದ ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಯವರು ಚೆನ್ನಮ್ಮನವರ ಐತಿಹಾಸಿಕ ಸಮಾಧಿ ಸ್ಥಳ, ಹುಟ್ಟೂರು ಕಾಕತೀ ಹಾಗೂ ಕಿತ್ತೂರು ಕೋಟೆಗಳನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಣೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಮನವಿ ಮಾಡಿದರು.
ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮನವರ ಹೆಸರು ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬೆಳವಡಿ ಮಲ್ಲಮ್ಮನವರ ಹೆಸರು ನಾಮಕರಣ ಮಾಡಬೇಕು. ಇಂಗ್ಲೆಂಡ್‌ನ ಬ್ರಿಟಿಷ್ ಲೈಬ್ರರಿಯಲ್ಲಿರುವ ಕಿತ್ತೂರು ಚೆನ್ನಮ್ಮನವರ ಐತಿಹಾಸಿಕ ಘಟಕ ಮತ್ತು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣರವರ ಖಡ್ಗಗಗಳನ್ನು ಮರಳಿ ಕರ್ನಾಟಕಕ್ಕೆ ತರಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಮುಂದಿನ ವರ್ಷದಿಂದ ಪ್ರಾಥಮಿಕ ಶಾಲಾ ಹಂತದಿಂದ ವಿಶ್ವವಿದ್ಯಾಲಯದವರೆಗೆ ಚೆನ್ನಮ್ಮನವರ ಜಯಂತಿಯನ್ನು ಆಚರಿಸಬೇಕು. ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ, ರಾಣಿ ಚೆನ್ನಮ್ಮ ಹೆಸರು ಮಹಿಳಾ ಸಬಲೀಕರಣ ಯೋಜನೆಗೆ ನಾಮಕರಣ ಮಾಡುವುದು. ಸಬಲೀಕರಣ ಯೋಜನೆಗಾಗಿ ಚೆನ್ನಮ್ಮ ಹೆಸರಿನಲ್ಲಿ ಬೆಂಗಳೂರಿನಲ್ಲಿ ಬೃಹತ್ ಭವನ ನಿರ್ಮಾಣ ಮಾಡಬೇಕೆಂದು ಅವರು ಮನವಿ ಮಾಡಿದರು.
ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮನವರ ಕುಟುಂಬಕ್ಕೂ, ನಮ್ಮ ಕುಟುಂಬಕ್ಕೂ ಅವಿನಾಭವ ಸಂಬಂಧವಿದೆ. ಅವರ ಮೊದಲ ಸೇನಾಪತಿ ಗುರುಸಿದ್ದಪ್ಪ ಸರದಾರ್ ಅವರು ತಮ್ಮ ತಾಯಿಯ ತಾತನವರು ಎಂದು ಹೇಳಿದರು.
ಕಿತ್ತೂರು ರಾಣಿ ಚೆನ್ನಮ್ಮ, ಬೆಲಾವಡಿ ಚೆನ್ನಮ್ಮ ಅವರ ಹೆಸರಿಗೆ ಜಾತಿ ಬಣ್ಣ ಕಟ್ಟಬಾರದು. ದೆಹಲಿಯಲ್ಲಿ ಅಕ್ಟೋಬರ್ 23 ರಂದು ಪ್ರತಿವರ್ಷ ವಿಜಯೋತ್ಸವ ಆಚರಿಸಬೇಕು. ಸಂಸತ್ ಭವನದಲ್ಲಿರುವ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಮೇಯರ್ ಎಂ. ಗೌತಮ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಆರ್. ಆರ್. ಜನ್ನು ಮತ್ತಿತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಸ್ವಾಗತಿಸಿದರು.

ಬಾಕ್ಸ್
ಪ್ರತಿವರ್ಷ ಸರ್ಕಾರದಿಂದ ನೀಡಲಾಗುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅನರ್ಹರನ್ನು ಆಯ್ಕೆ ಮಾಡಬಾರದು. ನೀರಿನಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವವರನ್ನು, ಅಪಘಾತಕ್ಕೊಳಗಾಗಿ ಅಸಹಾಯ ಸ್ಥಿತಿಯಲ್ಲಿರುವವರನ್ನು, ಕಾಪಾಡಿದ ಮಹಿಳೆಯೊಬ್ಬರಿಗೆ ಈ ಪ್ರಶಸ್ತಿ ನೀಡಬೇಕು. ಯಾರು ಸಿಕ್ಕದಿದ್ದರೆ, ಪ್ರಶಸ್ತಿಯೇ ಬೇಡ, ಲೇಟರೇಟ್ ತಂದವರಿಗೆಲ್ಲಾ ಪ್ರಶಸ್ತಿ ನೀಡುವುದು ಕಿತ್ತೂರು ರಾಣಿ ಚೆನ್ನಮ್ಮನಿಗೆ ಮಾಡಿದ ಅವಮಾನ.
ಲೀಲಾದೇವಿ ಆರ್. ಪ್ರಸಾದ್
ಮಾಜಿ ಸಚಿವರು.

Leave a Comment