ಕಾಸರಗೋಡು ಸ್ತಬ್ಧ

‘ಜಸ್ಟೀಸ್ ಫಾರ್ ಆಸಿಫಾ’ ಪ್ರತಿಭಟನೆ
ಕಾಸರಗೋಡು, ಏ.೧೬- ಜಮ್ಮು ಕಾಶ್ಮೀರದ ಕಥುವಾದಲ್ಲಿ ಎಂಟು ವರ್ಷದ ಬಾಲಕಿಯನ್ನು ಸರಣಿ ಅತ್ಯಾಚಾರ ಎಸಗಿ ಕೊಲೆಗೈದ ಕೃತ್ಯವನ್ನು ಖಂಡಿಸಿ ಕೇರಳದಲ್ಲಿ ಇಂದು ಬೆಳಗ್ಗೆಯಿಂದ ಅಘೋಷಿತ ಹರತಾಳ ನಡೆಯುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಖಾಸಗಿ, ಸರಕಾರಿ ಬಸ್ ಸೇರಿದಂತೆ ವಾಹನ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ. ಮುಳ್ಳೇರಿಯಾ, ಕಾಸರಗೋಡು, ವಿದ್ಯಾನಗರ ಪರಿಸರದಲ್ಲಿ ರಸ್ತೆಗೆ ಕಲ್ಲುಗಳನ್ನು ಅಡ್ಡಲಾಗಿಟ್ಟು ಪ್ರತಿಭಟನೆ ನಡೆಸಲಾಗುತ್ತಿದೆ.
ಜನಪರ ಸಮಿತಿ ಹೆಸರಿನಲ್ಲಿ ಹರತಾಳ ನಡೆಯುತ್ತಿದೆ. ವಾಟ್ಸ್ ಆಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ, ಸಂದೇಶ ರವಾನಿಸಿ ಹರತಾಳಕ್ಕೆ ಕರೆ ನೀಡಿದ್ದು, ಜನರಲ್ಲೂ ಗೊಂದಲ ಸೃಷ್ಟಿಸಿತ್ತು. ಆದರೆ ಇಂದು ಬೆಳಗ್ಗೆಯಿಂದ ಬಸ್ ಸೇರಿದಂತೆ ವಾಹನಗಳು ರಸ್ತೆಗಿಳಿದಿಲ್ಲ. ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಹಲವೆಡೆ ಟೈರ್, ಕಲ್ಲು, ಮರದ ತುಂಡುಗಳನ್ನಿಟ್ಟು ರಸ್ತೆ ತಡೆ ನಡೆಸಲಾಗಿದೆ. ಉಪ್ಪಳದಲ್ಲಿ ನಿನ್ನೆ ರಾತ್ರಿ ಸರಕಾರಿ ಬಸ್ಸೊಂದಕ್ಕೆ ಕಲ್ಲೆಸೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರ, ನಾಯಮ್ಮಾರಮೂಲೆ, ಎರಿಯಾಲ್, ಚೆರ್ಕಳ ಮೊದಲಾದೆಡೆ ವಾಹನಗಳನ್ನು ತಡೆದ ಘಟನೆ ವರದಿಯಾಗಿದೆ. ಈ ನಡುವೆ ವಾಹನಗಳನ್ನು ತಡೆಯಲೆತ್ನಿಸಿದ ೨೫ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಲವು ಬೈಕ್ ಮತ್ತು ಆಟೋಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ನಿನ್ನೆ ಸಂಜೆಯಿಂದ ‘ಕೇರಳ ಬಂದ್’ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಯಾವುದೇ ಸಂಘಟನೆ, ಪಕ್ಷವನ್ನು ಉಲ್ಲೇಖಿಸದೆ ಈ ಸಂದೇಶ ವ್ಯಾಪಕವಾಗಿ ರವಾನೆಯಾಗುತ್ತಿತ್ತು. ಪೊಲೀಸರು ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಇಂದು ಬೆಳಗ್ಗೆಯಿಂದ ಸಂಪೂರ್ಣ ಬಂದ್ ವಾತಾವರಣ ಹಾಗೂ ಹಲವೆಡೆ ವಾಹನಗಳನ್ನು ತಡೆದಾಗ ಪೊಲೀಸರು ಜಾಗೃತರಾಗಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದ್ದಾರೆ.

Leave a Comment