ಕಾಸರಗೋಡಿಗೂ ಕಾಲಿಟ್ಟ ಕೊರೊನಾ

ದ.ಕ. ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ | ವೆನ್‌ಲಾಕ್ ಆಸ್ಪತ್ರೆಯಲ್ಲಿ ೧೦ ಬೆಡ್ ವ್ಯವಸ್ಥೆ

ಮಂಗಳೂರು, ಫೆ.೪- ಚೀನಾ ದೇಶವನ್ನು ನಲುಗಿಸುತ್ತಿರುವ ಕೊರೊನಾ ವೈರಸ್ ವಿಶ್ವಾದ್ಯಂತ ವೇಗವಾಗಿ ಹರಡುತ್ತಿದೆ. ಈಗಾಗಲೇ ೩೫೦ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು ಅಲ್ಲಿ ತುರ್ತು ಪರಿಸ್ಥಿತಿಯಂಥ ವಾತಾವರಣ ನಿರ್ಮಾಣವಾಗಿದೆ. ಕೆಲವೇ ದಿನಗಳ ಹಿಂದೆ ಕೊರೊನಾ ವೈರಸ್ ಭಾರತಕ್ಕೆ ಕಾಲಿಟ್ಟಿದ್ದು ಕೇರಳದ ಮೂವರಲ್ಲಿ ಸೋಂಕು ಪತ್ತೆಯಾಗಿತ್ತು. ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಪರೀಕ್ಷೆ ವೇಳೆ ವೈರಸ್ ದೃಢಪಟ್ಟಿದೆ. ಅವರಲ್ಲಿ ಇಬ್ಬರು ಗುಣಮುಖರಾಗುತ್ತಿದ್ದಾರೆ. ಈ ಮಧ್ಯೆ ಕಾಸರಗೋಡು ಮೂಲದ ಯುವಕನಲ್ಲಿ ನಿನ್ನೆ ವೈರಸ್ ಕಾಣಿಸಿಕೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಚೀನಾದ ವುಹಾನ್ ವಿಶ್ವಾವುದ್ಯಾನಿಲಯದ ವಿದ್ಯಾರ್ಥಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಸೋಂಕು ಪೀಡಿತ ವಿದ್ಯಾರ್ಥಿಯನ್ನು ಕಾಞ೦ಗಾಡ್ ಜಿಲ್ಲಾಸ್ಫತ್ರೆಯಲ್ಲಿ ದಾಖಲಿಸಲಾಗಿದ್ದು ರಕ್ತ ಪರೀಕ್ಷೆ ಮಾಡಿದಾಗ ವೈರಸ್ ತಗಲಿರುವುದು ತಿಳಿದು ಬಂದಿದೆ. ವಿದ್ಯಾರ್ಥಿ ಚೇತರಿಸುತ್ತಿದ್ದಾನೆ.

ಕೇರಳದಲ್ಲಿ ಹೊಸದಾಗಿ ಮೂರು ಪ್ರಕರಣಗಳು ದಾಖಲಾಗಿರುವುದರಿಂದ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗಿದೆ. ಆರೋಗ್ಯ ಇಲಾಖೆ ಹೆಚ್ಚಿನ ಮುತುವರ್ಜಿಯನ್ನು ವಹಿಸಿಕೊಂಡು, ತಪಾಸಣೆ ಹಾಗೂ ಎಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ, ಹೆಚ್ಚಿನ ತಪಾಸಣಾ ಕೇಂದ್ರಗಳನ್ನು ಆರಂಭಿಸಿದ್ದು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಅನಾರೋಗ್ಯ ಕಂಡುಬಂದರೆ ತಕ್ಷಣವೇ ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ವೈದ್ಯರ ಸಲಹೆಯಂತೆಯೇ ಬಳಿಕ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಇಲಾಖೆ ಸೂಚನೆ ನೀಡಿದೆ. ಕರಾವಳಿ ಭಾಗದಲ್ಲೂ ವೈರಸ್ ಕುರಿತಂತೆ ಎಚ್ಚರಿಕೆ ವಹಿಸಲಾಗಿದೆ. ಕಾಸರಗೋಡಿನ ಕಾಞಂಗಾಡ್‌ನಲ್ಲಿ ವೈರಸ್ ಪತ್ತೆಯಾಗಿರುವ ಕಾರಣದಿಂದಾಗಿ ಕರಾವಳಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ ಎಚ್ಚರಿಕೆ ವಹಿಸಲಾಗಿದೆ. ಕೊರೊನಾ ಭೀತಿಯಿಂದ ಕೇರಳ ಸರಕಾರ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಖಾಸಗಿ ಕಾರ್ಯಕ್ರಮಗಳನ್ನು ನಡೆಸದಂತೆ ಕೇರಳ ಆರೋಗ್ಯ ಸಚಿವೆ ಶೈಲಜಾ ಮನವಿ ಮಾಡಿಕೊಂಡಿದ್ದಾರೆ.

 

೪೨೫ಕ್ಕೇರಿದ ಸಾವಿನ ಸಂಖ್ಯೆ

ಚೀನಾದಲ್ಲಿ ಕೊರೊನಾ ವೈರಾಣುವಿನಿಂದ ಸಾವಿಗೀಡಾದವರ ಸಂಖ್ಯೆ ೪೨೫ಕ್ಕೇರಿದೆ. ಒಂದೇ ದಿನ ೬೪ ಮಂದಿ ಸಾವಿಗೀಡಾಗಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ವೈರಸ್ ಹರಡುವಿಕೆಯ ಕೇಂದ್ರಬಿಂದುವಾಗಿರುವ ಮಧ್ಯೆ ಹುಬೈ ಪ್ರಾಂತ್ಯದಲ್ಲಿ ಸಾವಿನ ಸಂಖ್ಯೆ ಜಾಸ್ತಿಯಾಗಿದೆ. ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಅಮೆರಿಕ ನೀಡುವ ಸಹಾಯವನ್ನು ಸ್ವಾಗತಿಸುವುದಾಗಿ ಚೀನಾ ಹೇಳಿದೆ. ಸೋಂಕು ಪ್ರಕರಣಗಳ ಸಂಖ್ಯೆ ಮಂಗಳವಾರ ೩,೨೩೫ ಏರಿಕೆಯಾಗಿ ೨೦,೪೩೮ ಕ್ಕೆ ತಲುಪಿದೆ. ಅಮೆರಿಕ, ಜಪಾನ್, ಥಾಯ್ಲೆಂಡ್, ಹಾಂಗ್ ಕಾಂಗ್ ಮತ್ತು ಬ್ರಿಟನ್ ಸೇರಿದಂತೆ ಇತರ ೨೩ ದೇಶಗಳಲ್ಲಿ ೧೫೧ ಪ್ರಕರಣಗಳು ದಾಖಲಾಗಿವೆ. ಪ್ರಪಂಚದಾದ್ಯಂತದ ವಿಮಾನಯಾನ ಸಂಸ್ಥೆಗಳು ಚೀನಾದ ಕೆಲವು ಭಾಗಗಳಿಗೆ ವಿಮಾನ ಹಾರಾಟವನ್ನು ನಿಲ್ಲಿಸಿವೆ.

Leave a Comment