ಕಾಶ್ಮೀರ ಸಮಸ್ಯೆ: ಎಲ್ಲಾ ಪಾಲುದಾರರಿಗೆ ತೃಪ್ತಿಯಾಗುವ ರಾಜಕೀಯ ಪರಿಹಾರ ಅಗತ್ಯ- ಫಾರೂಕ್

ಶ್ರೀನಗರ, ಜು 11 -ಕಾಶ್ಮೀರ ಸಮಸ್ಯೆ ರಾಜಕೀಯ ಸಮಸ್ಯೆಯಾಗಿದ್ದು, ಇದಕ್ಕೆ ರಾಜಕೀಯ ಪರಿಹಾರವೇ ಸೂಕ್ತ ಎಂದು ಪುನರುಚ್ಚರಿಸಿರುವ ಮಾಜಿ ಮುಖ್ಯಮಂತ್ರಿ ಡಾ.ಫಾರೂಕ್ ಅಬ್ದುಲ್ಲಾ, ಸಮಸ್ಯೆಗೆ ನೀಡುವ ಫಲಿತಾಂಶ ಎಲ್ಲಾ ಪಾಲುದಾರರಿಗೆ ತೃಪ್ತಿಯಾಗಬೇಕು. ಯಾರಿಗೂ ದ್ರೋಹವಾಗಬಾರದು ಎಂದು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಎಲ್ಲಾ ಪಾಲುದಾರರಿಗೂ ತೃಪ್ತಿಯಾಗುವ ಮಾದರಿಯಲ್ಲಿ ಒಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‍ ಸಿ) ಅಧ್ಯಕ್ಷ ಡಾ. ಅಬ್ದುಲ್ಲಾ ಸುದ್ದಿಗಾರರಿಗೆ ತಿಳಿಸಿದರು.

ಅವರ ತಾಯಿ ಬೇಗಮ್ ಅಕ್ಬರ್ ಜಹಾನ್ ಅವರ 19ನೇ ಪುಣ್ಯತಿಥಿ ಪ್ರಯುಕ್ತ ಹಜ್ರತ್‍ ಬಾಲ್‍ನ ದಾಲ್ ಸರೋವರದ ದಡದಲ್ಲಿರುವ ನಸೀಮ್‍ ಬಾಗ್‍ನಲ್ಲಿರುವ ಸಮಾಧಿಗೆ ಗೌರವ ಸಲ್ಲಿಸಿದ ಬಳಿಕ ಅವರು ಈ ವಿಷಯ ತಿಳಿಸಿದರು.

ಶ್ರೀನಗರದ ಸಂಸದರೂ ಆಗಿರುವ ಡಾ.ಅಬ್ದುಲ್ಲಾ ಅವರೊಂದಿಗೆ ಎನ್‍.ಸಿ. ಪಕ್ಷದ ಹಲವು ನಾಯಕರು, ಕಾರ್ಯಕರ್ತರು ಕೂಡ ಶೇಖ್ ಮುಹಮ್ಮದ್ ಅಬ್ದುಲ್ಲಾ ಅವರ ಪತ್ನಿ ಬೇಗಮ್ ಅವರ ಸಮಾಧಿಗೆ ಗೌರವ ಸಲ್ಲಿಸಿದರು.

ಕಾಶ್ಮೀರದಲ್ಲಿರುವುದು ಒಂದು ರಾಜಕೀಯ ಸಮಸ್ಯೆ. ಅದಕ್ಕೆ ರಾಜಕೀಯ ಪರಿಹಾರವೇ ಅಗತ್ಯ. ಭಾರತ ಮತ್ತು ಪಾಕಿಸ್ತಾನ, ಎರಡೂ ದೇಶಗಳಿಗೂ ದ್ರೋಹವಾಗಬಾರದು ಎಂದು ಅವರು ಹೇಳಿದರು.

ರಾಜಕೀಯ ಸಮಸ್ಯೆಗೆ ರಾಜಕೀಯ ಪರಿಹಾರ ಇರಬೇಕು, ಕಾಶ್ಮೀರಕ್ಕೂ ಅದೇ ರಾಜಕೀಯ ಪರಿಹಾರ ಬೇಕು. ರಾಜ್ಯದ ಭಾಗಗಳಾದ ಜಮ್ಮು, ಕಾಶ್ಮೀರ ಮತ್ತು ಲಡಾಕ್ ನ ಸಮಸ್ಯೆಗಳಿಗೂ ರಾಜಕೀಯ ಪರಿಹಾರ ಬೇಕಾಗಿದೆ. ರಾಜ್ಯದ ಎಲ್ಲಾ ಪಾಲುದಾರರೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಬೇಕು, ಯಶಸ್ವಿ ಫಲಿತಾಂಶಕ್ಕೆ ಕಾರಣವಾಗುವ ಮಾತುಕತೆಯ ಬಾಗಿಲುಗಳನ್ನು ತೆರೆಯಬೇಕು ಎಂದು ಅಬ್ದುಲ್ಲಾ ಹೇಳಿದರು.

ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಅಬ್ದುಲ್ಲಾ, ಹುರಿಯತ್ ಮಾತುಕತೆಗೆ ಸಿದ್ಧವಿದೆ ಎಂದು ರಾಜ್ಯಪಾಲರು ಜೂನ್ 22ರಂದು ತಿಳಿಸಿದ್ದಾರೆ ಎಂದರು.

ಬಿಜೆಪಿ ತನ್ನ ಅಭೂತಪೂರ್ವ ಜಯವನ್ನು ಜಮ್ಮು ಮತ್ತು ಕಾಶ್ಮೀರದ ಸುದೀರ್ಘ ಕಾಲದ ಸಮಸ್ಯೆಯನ್ನು ಇತ್ಯರ್ಥಪಡಿಸಲು ಬಳಸಿಕೊಳ್ಳಬೇಕು ಎಂದು ಡಾ.ಅಬ್ದುಲ್ಲಾ ಹೇಳಿದರು.

ಮಾತುಕತೆಗೆ ಬೇರೆ ಪರ್ಯಾಯಗಳಿಲ್ಲ. ಮಾತುಕತೆಯಿಂದಲೇ ಹೆಚ್ಚಿನ ತಿಳುವಳಿಕೆಯನ್ನು ಹೊಂದಲು, ಕೇಳಲು, ಪ್ರತಿಬಿಂಬಿಸಲು ಸಾಧ್ಯವಾಗುತ್ತದೆ. ಹುರಿಯತ್‍ನೊಂದಿಗೆ ಮಾತುಕತೆ ನಡೆಸಲು ಇದು ಸೂಕ್ತ ಸಮಯವಾಗಿದ್ದು, ಮಾತುಕತೆಯ ಎಲ್ಲಾ ಬಾಗಿಲುಗಳನ್ನು ಕೇಂದ್ರ ಸರ್ಕಾರ ತೆರೆಯಬೇಕು. “ಕಾಶ್ಮೀರಿಯತ್, ಜಮೂರಿಯತ್ ಮತ್ತು ಇನ್ಸಾನಿಯತ್” ಮುಂತಾದ ಪದಪುಂಜಗಳನ್ನು ಬಹಳ ಸಮಯದಿಂದ ಕೇಳುತ್ತಿದ್ದೇವೆ, ಆದರೆ ಅವುಗಳು ಕಾರ್ಯರೂಪಕ್ಕೆ ತರಲು ಪರಿಣಾಮಕಾರಿಯಾಗಿ ಏನನ್ನೂ ಮಾಡಲಾಗಿಲ್ಲ ಎಂದು ಆರೋಪಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚು ವಿಳಂಬ ಮಾಡದೆ ದಿ.ಮಾಜಿ ಪ್ರಧಾನಿ ವಾಜಪೇಯಿ ಅವರು ತೋರಿದ್ದ ಮಾರ್ಗವನ್ನು ಅನುಸರಿಸಬೇಕು. ಅವರು ಸೂಚಿಸಿದ್ದ ತತ್ವಗಳಡಿ ರಾಜ್ಯದ ಎಲ್ಲಾ ಪಾಲುದಾರರೊಂದಿಗೆ ಕೇಂದ್ರ ಸರ್ಕಾರ ಮಾತುಕತೆಗೆ ಮುಂದಾಗಬೇಕು. ಎಲ್ಲಾ ಪಾಲುದಾರರೊಂದಿಗೆ ಮಾತುಕತೆ ನಡೆಸಲು ಬಾಗಿಲು ತೆರೆಯುವುದರಿಂದ ಶಾಂತಿ ಪುನರ್ ಸ್ಥಾಪಿಸುವ ಪ್ರಕ್ರಿಯೆಗೆ ವೇಗ ನೀಡಿದಂತಾಗುತ್ತದೆ. ಬಿಜೆಪಿ ತನ್ನ ಅಭೂತಪೂರ್ವ ಜನಾದೇಶವನ್ನು ಎಲ್ಲಾ ಪಾಲುದಾರರೊಂದಿಗೆ ಮಾತುಕತೆಗೆ ಬಳಸಿಕೊಳ್ಳಲು ಇದು ಸೂಕ್ತ ಸಮಯ ಎಂದು ಅವರು ಸಲಹೆ ನೀಡಿದರು.

ಮಾತುಕತೆಯ ಅಗತ್ಯವನ್ನು ಒತ್ತಿ ಹೇಳಿದ ಅವರು, ಕೇಂದ್ರ ಸರ್ಕಾರವು ಸಮಸ್ಯೆಯ ಬಾಹ್ಯ ಆಯಾಮಗಳನ್ನು ಸಹ ಪರಿಹರಿಸಬೇಕು ಮತ್ತು ಕಾರ್ಯತಂತ್ರ ಮತ್ತು ರಾಜತಾಂತ್ರಿಕತೆಯ ವಿಧಾನವನ್ನು ಬಳಸಬೇಕು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾಡಿದ ಉತ್ತಮ ಕಾರ್ಯಗಳನ್ನು ಕೇಂದ್ರ ಸರ್ಕಾರ ಮುಂದುವರಿಸಬೇಕು. ಪಾಕಿಸ್ತಾನವೂ ಭಾರತದ ನಿಜವಾದ ಅಹವಾಲುಗಳಿಗೆ ಕಿವಿಯಾಗಬೇಕು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹೆಚ್ಚು ಪ್ರಚಲಿತದಲ್ಲಿರುವ ‘ನೆರೆಹೊರೆ ಮೊದಲು’ ನೀತಿಯು ನೆರೆಹೊರೆಯವರನ್ನು ಬಿಟ್ಟುಬಿಟ್ಟರೆ ಭಾರತಕ್ಕೆ ಹೆಚ್ಚು ನಿರೀಕ್ಷಿತ ರಾಜತಾಂತ್ರಿಕ ಲಾಭವನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತ ಮತ್ತು ಪಾಕಿಸ್ತಾನದ ಸ್ನೇಹಪರತೆ ಅನಿವಾರ್ಯ ಎಂದು ನಾನು ನಂಬುತ್ತೇನೆ. ಕೇಂದ್ರದಲ್ಲಿ ಹೊಸ ಸರ್ಕಾರವು, ಈ ಪ್ರದೇಶದಲ್ಲಿ ಶಾಂತಿಯನ್ನು ತರಲು ಸಾಧ್ಯವಾದರೆ, ಇನ್ನೂ ಹೆಚ್ಚಿನ ಜನಾದೇಶದೊಂದಿಗೆ ಖಂಡಿತವಾಗಿಯೂ ಹೆಚ್ಚಿನ ಗೌರವವನ್ನು ಗಳಿಸುತ್ತದೆ. ಈ ಪ್ರದೇಶವನ್ನು ಬಾಧಿಸುತ್ತಿರುವ ದೀರ್ಘಕಾಲದ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾಗದ ಸರ್ಕಾರವಾಗಿ ಇತಿಹಾಸದಲ್ಲಿ ಗುರುತಿಸಿದರೆ ಅದಕ್ಕಿಂತ ದೊಡ್ಡ ಹಿನ್ನಡೆ ಬೇರೊಂದಿಲ್ಲ ಎಂದು ಅವರು ಹೇಳಿದ್ದಾರೆ.

Leave a Comment