ಕಾಶ್ಮೀರ ಪರಿಸ್ಥಿತಿ ಅಮೆರಿಕ ಕಳವಳ

ವಾಷಿಂಗ್‌ಟನ್, ಅ ೨೩- ಕಾಶ್ಮೀರ ಕಣಿವೆಯಲ್ಲಿನ ಸ್ಥಿತಿಗತಿಗಳ ಬಗ್ಗೆ ಅಮೇರಿಕಾ ಕಳವಳಗೊಂಡಿದೆ ಎಂದು ಅಮೇರಿಕಾ ವಿದೇಶಾಂಗ ಇಲಾಖೆಯ ಉಪ ಕಾರ್ಯದರ್ಶಿ ಆಲೀಸ್ ವೆಲ್ಸ್ ಹೇಳಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ೩೭೦ನೇ ವಿಧಿ ರದ್ದು ಮತ್ತು ಜಮ್ಮು ಕಾಶ್ಮೀರವನ್ನು ೨ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಾಗಿಸಿರುವ ಭಾರತದ ಕ್ರಮವನ್ನು ಅಮೇರಿಕಾ ಬೆಂಬಲಿಸುತ್ತದೆ. ಇದರಿಂದ ಭಾರತದ ಇತರೆ ರಾಜ್ಯಗಳಲ್ಲಿ ಆಗುವ ಅಭಿವೃದ್ಧಿ ಕಾರ್ಯಗಳು ಇಲ್ಲಿ ನಡೆಯಲು ಸಾಧ್ಯವಾಗಿ ಕಣಿವೆ ರಾಜ್ಯ ಉಳಿದ ರಾಜ್ಯಗಳಂತೆ ಅಭಿವೃದ್ಧಿ ಹೊಂದುತ್ತದೆ. ಹಾಗೂ ಜನಕ್ಕೆ ಹೆಚ್ಚಿನ ಅಧಿಕಾರವು ಸಿಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಭಾರತದ ಈ ನಡೆಯನ್ನು ಅಮೇರಿಕಾ ಬೆಂಬಲಿಸುತ್ತದೆ. ಆದರೆ ಆ. ೫ ರಿಂದ ಕಾಶ್ಮೀರ ಕಣಿವೆ ಸರಿಸುಮಾರು ೮ ದಶಲಕ್ಷ ನಿವಾಸಿಗಳು ಉಸಿರು ಬಿಗಿ ಹಿಡಿದು ಜೀವನ ಸಾಗಿಸುವಂತ ಪರಿಸ್ಥಿತಿ ಎದುರಿಸುತ್ತಿದ್ದಾರೆ, ಪೊಲೀಸರು, ಅರೆ ಸೇನಾ ಪಡೆಗಳು ಎಲ್ಲ ಪ್ರದೇಶಗಳಲ್ಲೂ ಆವರಿಸಿದ್ದಾರೆ. ಇದು ಜನರ ಸಹಜ ಚಟುವಟಿಕೆಗೆ ಅಡ್ಡಿಯಾಗಿದೆ. ಈ ಬಗ್ಗೆ ಅಮೇರಿಕಾ ಹೆಚ್ಚಿನ ಕಳವಳ ಹೊಂದಿದೆ ಎಂದು ಅಮೇರಿಕಾದ ವಿದೇಶಾಂಗ ಇಲಾಖೆಯ ದಕ್ಷಿಣ ಏಷ್ಯಾ ವ್ಯವಹಾರಗಳ ಉಪ ಕಾರ್ಯದರ್ಶಿಯಾಗಿರುವ ಆಲೀಸ್ ವೆಲ್ಸ್ ಹೇಳಿದ್ದಾರೆ.
ಕಾಶ್ಮೀರ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟು ಶಮನಕ್ಕೆ ಮಾತುಕತೆಯೊಂದೇ ಮಾರ್ಗ. ಕಾಶ್ಮೀರ ವಿಷಯ ಎರಡು ದೇಶಗಳ ನಡುವಿನ ದ್ವಿ ಪಕ್ಷೀಯ ವಿಷಯವಾಗಿದ್ದು ಅದನ್ನು ದ್ವಿ ಪಕ್ಷೀಯ ಚರ್ಚೆಗಳ ಮೂಲಕವೇ ಬಗೆಹರಿಸಿಕೊಳ್ಳಬೇಕೆಂದು ಅಮೇರಿಕಾ ಮೊದಲಿನಿಂದಲೂ ಹೇಳುತ್ತಾ ಬಂದಿದೆ. ಅದು ಅಮೇರಿಕಾದ ನಿಲುವು ಆಗಿದೆ. ಆದರೆ ತಾವು ಈಗಾಗಲೇ ಹೇಳಿರುವಂತೆ ಪಾಕಿಸ್ತಾನ ಉಗ್ರರನ್ನು ಬೆಂಬಲಿಸುವ ತನ್ನ ನಡೆಯನ್ನು ಕೈಬಿಡದ ಹೊರತು ಇಂತಹ ಮಾತುಕತೆ ಅವಕಾಶ ಕೂಡಿಬರುವುದಿಲ್ಲ. ಹಲವಾರು ಬಾರಿ ಈ ಕುರಿತಂತೆ ಪಾಕಿಸ್ತಾನಕ್ಕೆ ಅಮೇರಿಕಾ ಸೂಚಿಸಿದೆ. ಮತ್ತು ಉಪಖಂಡದಲ್ಲಿ ಉಂಟಾಗಬಹುದಾದ ಯುದ್ಧದ ವಾತಾವರಣ ತಿಳಿ ಆಗಲು ಆದಷ್ಟು ಬೇಗ ಭಾರತದೊಂದಿಗೆ ದ್ವಿ ಪಕ್ಷೀಯ ಚರ್ಚೆ ಆರಂಭಿಸಬೇಕೆಂದು ಪಾಕಿಸ್ತಾನಕ್ಕೆ ಸೂಚಿಸಲಾಗಿದೆ ಎಂದರು.
ದ್ವಿ ಪಕ್ಷೀಯ ಚರ್ಚೆಗೆ ಮುಖ್ಯವಾಗಿ ಅಗತ್ಯವಿರುವುದು ಪರಸ್ಪರ ನಂಬಿಕೆ. ಸದ್ಯಕ್ಕೆ ಎರಡು ದೇಶಗಳ ನಡುವೆ ಆ ನಂಬಿಕೆಗೆ ಭಾರೀ ಕೊರತೆಯಾಗಿದೆ. ಜಮ್ಮು-ಕಾಶ್ಮೀರದಲ್ಲಿ ೩೭೦ನೇ ವಿಧಿ ರದ್ದು ನಂತರದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಎರಡು ಕಡೆಗಳಿಂದ ನಡೆಯುತ್ತಿರುವ ಗುಂಡಿನ ದಾಳಿ, ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕ್ ಸೇನಾ ಪಡೆಗಳು ಭಾರತೀಯ ಸೇನಾ ಮುಂಚೂಣಿ ಠಾಣೆಗಳು ಮತ್ತು ನಾಗರೀಕ ವಲಯಗಳ ಮೇಲೆ ಶೆಲ್ ದಾಳಿ ಇದಕ್ಕೆ ಅಡ್ಡಿಯಾಗಿ ಭಾರತೀಯ ಪಡೆಗಳು ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದಲ್ಲಿಯ ಉಗ್ರರ ಶಿಬಿರಗಳ ಮೇಲೆ ನಡೆಸಿರುವ ದಾಳಿ ಇವು ಗಡಿಯಲ್ಲಿ ಸ್ಫೋಟಕ ಸ್ಥಿತಿಯನ್ನು ಉಂಟು ಮಾಡಿದೆ. ಈ ಎಲ್ಲ ಘಟನೆಗಳನ್ನು ಅಮೇರಿಕಾ ಗಂಭೀರವಾಗಿ ಗಮನಿಸುತ್ತಿದೆ. ಹಾಗೂ ಎರಡು ರಾಷ್ಟ್ರಗಳು ಉದ್ವಿಗ್ನ ಶಮನಕ್ಕೆ ಮುಂದಾಗಲು ಸೂಚಿಸುತ್ತಿದೆ ಎಂದೂ ಆಲೀಸ್ ವೆಲ್ಸ್ ಹೇಳಿದ್ದಾರೆ.

Leave a Comment