ಕಾಶ್ಮೀರದಿಂದ-ಕನ್ಯಾಕುಮಾರಿಗೆ ಟೆಕ್ಕಿಯ ಸೈಕಲ್ ಯಾತ್ರೆ

ಲಿಂಗ ಸಮಾನತೆಗಾಗಿ ಸರ್ಕಾರ ಅದೆಷ್ಟೋ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆದರೆ ಹೆಣ್ಮಕ್ಕಳ ಮೇಲೆ ನಡೆಯುವ ದೌರ್ಜನ್ಯಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ. ಇದೆಲ್ಲಾ ಕೊನೆಯಾಗಬೇಕಾದರೆ ಶಾಲಾ ಮಕ್ಕಳಲ್ಲೇ ಸಮಾನತೆಯ ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ದಿಟ್ಟ ಯುವತಿ ಕಾಶ್ಮೀರದಿಂದ-ಕನ್ಯಾಕುಮಾರಿ ವರೆಗೆ ಸೈಕಲ್ ಜಾಥಾ ಕೈಗೊಂಡಿದ್ದಾರೆ.

ಮೈಸೂರಿನ ಸಾಫ್ಟ್‌ವೇರ್ ಎಂಜಿನಿಯರಿಂಗ್ ಪದವೀಧರೆ ಶೃತಿ ಸ್ಟೆಪ್‌ಔಟ್ ಹೆಸರಿನಲ್ಲಿ ಈ ಜಾಥಾಕ್ಕೆ ಮುಂದಾಗಿರುವ ಯುವತಿ. ಅಂದಹಾಗೆ ಶೃತಿ ಮಂಗಳೂರು ವಿವಿಯ ವಿಶ್ರಾಂತ ಕುಲಪತಿ ದಿ.ಶಿವಶಂಕರ ಮೂರ್ತಿ ಅವರ ಕಿರಿಯ ಪುತ್ರಿ. ಲಿಂಗ ಸಮಾನತೆಗಾಗಿ ಸೈಕಲ್ ಏರಿ ದೇಶ ಪರ್ಯಟನೆ ಮಾಡುತ್ತಿರುವ  ದಿಟ್ಟ ಯುವತಿ. ಫೆ. ೮ರಿಂದ ಕಾಶ್ಮೀರದಿಂದ ತಮ್ಮ ಪಯಣ ಆರಂಭಿಸಿದ್ದರು. ಈಗಾಗಲೇ ೩,೪೦೦ಕಿ.ಮೀ ದೂರ ಕ್ರಮಿಸಿದ್ದಾರೆ.

ಮೈಸೂರಲ್ಲೇ ಹುಟ್ಟಿ ಬೆಳೆದ ಶೃತಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜಸ್ಥಾನದಲ್ಲಿ ಜೀವನ ಕೌಶಲ್ಯದ ಕುರಿತಾಗಿ ನಡೆಸಿದ ಅಧ್ಯಯನಕ್ಕೆ ಫೆಲೋಶಿಪ್ ಕೂಡ ಪಡೆದಿದ್ದಾರೆ. ಆಗಲೇ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಆಲೋಚನೆ ಹೊಳೆದಿತ್ತಂತೆ. ಅಲ್ಲಿಂದಲೇ ಸೈಕ್ಲಿಂಗ್ ತರಬೇತಿ ಪಡೆದು ಸವಾರಿಗೆ ಮುಂದಾಗಿಯೇ ಬಿಟ್ಟರಂತೆ.

ಸೈಕಲ್ ಜಾಥಾ ವೇಳೆ ಮಾರ್ಗ ಮಧ್ಯೆ ಸಿಗುವ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ, ಸಾಮಾಜಿಕ ಕಟ್ಟುಪಾಡು, ಪುರುಷ ಪ್ರಾಧಾನ್ಯ ಧೋರಣೆಗಳನ್ನು ಮೀರಿ ಶಿಕ್ಷಣದತ್ತ ಹೆಜ್ಜೆಯಿಡಿ ಎಂದು ಮಹಿಳೆಯರಿಗೆ ತಿಳಿಹೇಳುತ್ತಾರೆ. ಫೆ.೮ರಂದು ಜಮ್ಮುವಿನಲ್ಲಿ ಸೈಕಲ್ ಜಾಥಾ ಆರಂಭಗೊಂಡಾಗ ಸಹಪಾಠಿಗಳಾದ ರೂಪಟರ್ ಮತ್ತು ಅನಗ ಅವರು ಕಾರಿನ ಮೂಲಕ ಗೋವಾದವರೆಗೂ ಹಿಂಬಾಲಿಸಿದ್ದು, ತಾನು ಶಾಲೆಗಳಲ್ಲಿ ನೀಡಬೇಕಿದ್ದ ಕಾರ್ಯಕ್ರಮಗಳನ್ನು ಅವರೇ ನಿಗದಿಪಡಿಸುತ್ತಿದ್ದರು. ಗೋವಾದಲ್ಲಿ ಅವರಿಬ್ಬರು ಪಯಣಿಸುತ್ತಿದ್ದ ಕಾರು ಕೆಟ್ಟುಹೋಗಿ ಹಣದ ಸಮಸ್ಯೆಯಿಂದ ಅವರು ಅಲ್ಲಿಂದಲೆ ಹಿಂದಿರುಗಬೇಕಾದ ಸ್ಥಿತಿ ಬಂತು ಎಂದರು.

ಅಲ್ಲಿಂದ ತಾನೊಬ್ಬಳೇ ಮುಂದುವರಿದಿದ್ದು, ಮಾರ್ಚ್ ೨೪ರಂದು ಕನ್ಯಾಕುಮಾರಿ ತಲುಪಲು ಯೋಜನೆ ರೂಪಿಸಿರುವುದಾಗಿ ಹೇಳಿದ್ದಾರೆ.  ಪ್ರಯಾಣದ ವೇಳೆ ಒದಗಿದ ತೊಂದರೆಗಳನ್ನು ಮೆಲುಕು ಹಾಕಿದ ಶೃತಿ, ಕುಂದಾನಗರಿಯ ಎತ್ತರದ ಗುಡ್ಡಗಾಡು ಪ್ರದೇಶದಲ್ಲಿ ನಡೆದ ಗ್ರೇಟ್ ಮಲ್ನಾಡ್ ಚಾಲೆಂಜ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ವಿಪರೀತ ಜ್ವರವಿದ್ದರೂ ಸ್ಪರ್ಧಿಸಿದ್ದಾಗಿ ಮೆಲುಕು ಹಾಕಿದರು.

Leave a Comment