ಕಾಶ್ಮೀರದಲ್ಲಿ ಸೆಣಸಾಡಿದ ಧೀರ ಸೈನಿಕ ಈಗ ಯಶಸ್ವಿ ಉದ್ಯಮಿ

 

 

ನಗರದ ರಾಮಮೂರ್ತಿನಗರದ ಜಾನು ಐಯ್ಯಂಗಾರ್ ಕೇಕ್ ಪ್ಯಾಲೇಸ್ ಬೇಕರಿ ಪ್ರಿಯರ ಇಷ್ಟದ ತಾಣ. ದಿನ ನಿತ್ಯ ನೂರಾರು ಜನ ಗ್ರಾಹಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಬೇಕರಿಯ ವಿಶೇಷತೆ ಎಂದರೆ, ಇಲ್ಲಿನ ಶುಚಿತ್ವ, ಶಿಸ್ತು ಹಾಗೂ ರುಚಿಕಟ್ಟಾದ ತಿಂಡಿ ತಿನಸುಗಳು. ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ಇದರ ಮಾಲೀಕ ಎಂ ಮಹೇಶ್ ಕಾಶ್ಮೀರದಲ್ಲಿ ಉಗ್ರರ ಜತೆಗೆ ಕಾದಾಡಿದ ಧೀರ ಯೋಧ. ಕರ್ನಾಟಕ ಸರಕಾರದ ಉಚಿತ ಕೌಶಲ್ಯ ಕರ್ನಾಟಕ ಯೋಜನೆಯನ್ನು ಸರಿಯಾಗಿ ಅನುಷ್ಠಾನಗೊಳಿಸಿದರೆ ಅದು ಹೇಗೆ ಜನಸಾಮಾನ್ಯರ ಬದುಕನ್ನು ಬೆಳಗ ಬಲ್ಲದು ಎಂಬುದಕ್ಕೆ ಈ ಮಾಜಿ ಯೋಧ ಸಾಕ್ಷಿ.

ಸಾಮಾನ್ಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುವ ಯೋಧರು ನಿವೃತ್ತಿ ಬಳಿಕದ ಜೀವನಕ್ಕೆ ಅವಲಂಬಿಸುವುದು ಭದ್ರತಾ ಸಿಬ್ಬಂದಿ ಕೆಲಸವನ್ನು. ಇಂದಿರಾ ಕ್ಯಾಂಟಿನ್ ಆಗಲಿ, ಅಥವಾ ಯಾವುದೇ ದೊಡ್ಡ ಕಟ್ಟಡವಾಗಲಿ, ಅಲ್ಲೆಲ್ಲ ನಿವೃತ್ತ ಯೋಧರು ಭದ್ರತಾ ಸಿಬ್ಬಂದಿಯಾಗಿ ತಮ್ಮ ಜೀವನ ಸವೆಸುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧವಾದ ಬದುಕು ಎಂ ಮಹೇಶ್ ಅವರದ್ದು. ನಿವೃತ್ತಿಯ ಬಳಿಕ ಅವರೀಗ ಯಶಸ್ವಿ ಉದ್ಯಮಿ.

ಮಹೇಶ್ ೧೮ ವರ್ಷಗಳ ಕಾಲ ಸೇನೆಯಲ್ಲಿ ನಾನಾ ಹಂತಗಳಲ್ಲಿ ಸೇವೆ ಸಲ್ಲಿಸಿದವರು. ೧೯೯೯ರಿಂದ ೨೦೧೭ರವರೆಗೆ ಅವರು ತಾಯ್ನಾಡಿನ ರಕ್ಷಣೆಯ ಕಂಕಣ ತೊಟ್ಟಿದ್ದರು. “”ಕಾಶ್ಮೀರವೆಂದರೆ ಅದೊಂದು ದೊಡ್ಡ ರಣರಂಗವೇ ಸರಿ,” ಎಂದು ನೆನಪಿಸಿಕೊಳ್ಳುವ ಇವರು, ನಿವೃತ್ತಿಯ ಬಳಿಕ, ಉದ್ಯಮಿಯಾಗುವ ಬಹುದೊಡ್ಡ ಕನಸು ಕಂಡಿದ್ದರು.

ಅವರ ಕನಸಿಗೆ ನೀರೆರದದ್ದು ಕೌಶಲ್ಯ ಕರ್ನಾಟಕ ಯೋಜನೆ. ನಗರದ ಡಾಲರ್ ಆಕಾಡಮಿ ಫಾರ್ ಸ್ಕಿಲ್ ಆಂಡ್ ಎಂಟರ್‌ಪ್ರೆನರ್‌ಶಿಪ್ (ಡಿಎಎಸ್‌ಇ)ನ ಸಂಸ್ಥಾಪಕ ಕೆಪಿ ಜಯಪ್ರಕಾಶನ್ ಹಾಗೂ ಮದ್ರಾಸ್ ಇಂಜಿನಿಯರ್ ಗ್ರೂಪ್, ಬೆಂಗಳೂರಿನ ಕರ್ನಲ್ ವರ್ಗಿಸ್ ಡೇನಿಯಲ್ ಅವರ ಬೆಂಬಲಕ್ಕೆ ನಿಂತರು. “ಆವರಿಬ್ಬರು ನನ್ನ ಸಾಧನೆಯ ಹಿಂದಿನ ಪ್ರರೇಕ ಶಕ್ತಿಗಳು,” ಎನ್ನುತ್ತಾರೆ ಮಹೇಶ್.
“ಆರಂಭದಲ್ಲಿ ನಾನು ಡಿಎಎಸ್‌ಇನಲ್ಲಿ ಬೇಕರಿ ಹಾಗೂ ಇನ್ನಿತರ ತಿಂಡಿ ತಿನಸುಗಳ ತಯಾರಿಕೆಯ ಅನುಭವ ಪಡೆದೆ. ಬಳಿಕ ಜಯಪ್ರಕಾಶನ್ ಸ್ವತ: ನನ್ನ ಬೇಕರಿ ಸ್ಥಾಪನೆಯ ಕನಸಿನ ರೂಪುರೇಷೆಗೆ ಜೀವ ತುಂಬಿದರು. ಸ್ವತ: ಅವರೇ ಈ ಬೇಕರಿಯ ಒಳಾಂಗಣ ವಿನ್ಯಾಸಗೊಳಿಸಿ, ಅಗತ್ಯ ಉಪಕರಣಗಳನ್ನು ಒದಗಿಸಿದರು. ನಾನೀಗ ಇತರ ಹಲವಿಗೆ ಉದ್ಯೋಗದಾತನಾಗಿದ್ದೇನೆ,” ಎನ್ನುವಾಗ ಮಹೇಶ್ ಕಣ್ಣಲ್ಲಿ ಸಾಧನೆಯ ಬೆಳಕು ಮೂಡುತ್ತದೆ.

Leave a Comment