ಕಾಶ್ಮೀರದಲ್ಲಿ ಸಹಜ ಸ್ಥಿತಿಗೆ ಮರಳಿದ ಸಾರಿಗೆ ವ್ಯವಸ್ಥೆ

ಶ್ರೀನಗರ, ಜೂ 13 – ವಿವಿಧ ಬೇಡಿಕೆಗಳ ಈಡೇರಿಕೆಗೆ ಕಾಶ್ಮೀರ ಕಣಿವೆಯಲ್ಲಿ ನಿನ್ನೆ ಇಡೀ ದಿನ ಸಾರ್ವಜನಿಕ ಸಾರಿಗೆ ನೌಕರರು ನಡೆಸಿದ ಮುಷ್ಕರದಿಂದ ಅಸ್ತವ್ಯಸ್ತಗೊಂಡಿದ್ದ ವಾಹನ ಸಂಚಾರ ಇಂದು ಯಥಾಸ್ಥಿತಿಗೆ ಮರಳಿದೆ

ಇಂದು ಮುಂಜಾನೆಯಿಂದಲೇ ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರ ಸೇರಿದಂತೆ ಕಾಶ್ಮೀರ ಕಣಿವೆಯಲ್ಲಿ ಕಾರು, ಬಸ್ಸು, ಮಿನಿ ಬಸ್ಸು ಹಾಗೂ ಇತರೆ ಸಾರ್ವಜನಿಕ ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದ ದೃಶ್ಯ ಕಂಡು ಬಂತು

ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ವಾಣಿಜ್ಯ ವಾಹನಗಳಿಗೆ ಸಾಮರ್ಥ್ಯ ಪ್ರಮಾಣಪತ್ರ ನೀಡುತ್ತಿಲ್ಲ ಹಾಗೂ ಅಧಿಕಾರಿಗಳು ವಾಹನಗಳಿಗೆ ವಾಹನ ಟ್ರಾಕಿಂಗ್ ಸಾಧನ (ವಿಟಿಡಿ) ಹಾಗೂ ಅಪಾಯ ಸೂಚಕ ಸಾಧನವನ್ನು (ಪಿಬಿ) ಅಳವಡಿಸುವಂತೆ ಒತ್ತಾಯಿಸುತ್ತಿದ್ದಾರೆಂದು ಆರೋಪಿಸಿ ನಿನ್ನೆ ವಿವಿಧ ಸಾರಿಗೆ ಸಂಸ್ಥೆಗಳು ಮುಷ್ಕರಕ್ಕೆ ಕರೆ ನೀಡಿದ್ದವು.

ವಾಹನಗಳು ಕಳುವಾದಲ್ಲಿ ಸುಲಭವಾಗಿ ಪತ್ತೆ ಹಚ್ಚಲು ಸಹಾಯವಾಗುವಂತೆ ಸಾರಿಗೆ ಅಧಿಕಾರಿಗಳು ವಾಹನಗಳಿಗೆ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆ ಇರುವ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವಂತೆ ಸೂಚಿಸಿದ್ದಾರೆ. ಆದರೆ ಇದುವರೆಗೂ ಕಳುವಾಗಿರುವ ಅನೇಕ ಟ್ಯಾಕ್ಸಿ ಹಾಗೂ ಟ್ರಕ್‌ಗಳನ್ನು ಅವರಿಂದ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಸಾರಿಗೆ ಸಂಸ್ಥೆಯ ಮಾಲೀಕರು ಆರೋಪಿಸಿದ್ದಾರೆ.

ಈ ಮಧ್ಯೆ, ಭಾರತೀಯ ಕಮ್ಯುನಿಷ್ಟ್ ಪಾರ್ಟಿಯ ಹಿರಿಯ ನಾಯಕರಾದ ಮಹಮ್ಮದ್ ಯೂಸುಫ್ ತರಿಗಮಿ ಅವರು, ವಾಹನ ಮಾಲೀಕರಿಗೆ ಬೆಂಬಲ ನೀಡಿ, ಅವರ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.

ಕಳೆದ ಮೂರು ದಶಕಗಳಿಂದ ರಾಜ್ಯದಲ್ಲಿ ಉಗ್ರಗಾಮಿ ಚಟುವಟಿಕೆಗಳಿಂದ ಸಾರಿಗೆದಾರರು ಬಹಳ ನಷ್ಟ ಅನುಭವಿಸುತ್ತಿದ್ದು, ಭಾರಿ ಮೊತ್ತದ ಟೋಲ್ ತೆರಿಗೆ ವಿಧಿಸುವುದರಿಂದ ಮತ್ತು ಆಧುನಿಕ ಸಾಧನಗಳನ್ನು ವಾಹನಗಳಿಗೆ ಅಳವಡಿಸಿ ಎಂದು ಒತ್ತಾಯಿಸುವುದರಿಂದ ಅವರು ಬಹಳ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರತಿಯೊಂದು ವಾಹನಕ್ಕೂ ಆಧುನಿಕ ಸಾಧನ ಅಳವಡಿಸಲು ಸಾವಿರಾರು ರೂಪಾಯಿಗಳ ಅವಶ್ಯಕತೆ ಇದ್ದು, ಇದು ಸಾರಿಗೆದಾರರಿಗೆ ಮತ್ತಷ್ಟು ಹೊರೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

Leave a Comment