ಕಾಳೆ ಅವರನ್ನು ವಾಲ್ಮೀಕಿ ನಿಗಮದಲ್ಲಿ ಮುಂದುವರೆಸಲು ಮನವಿ

ರಾಯಚೂರು.ನ.11- ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳಾಗಿದ್ದ ವೈ.ಎ.ಕಾಳೆ ಅವರು ದಕ್ಷ ಅಧಿಕಾರಿಗಳಾಗಿದ್ದು, ಅವರ ವಿರುದ್ಧ ಕೆಲ ದಲಿತ ಸಂಘಟನೆಗಳು ಆಧಾರ ರಹಿತ ಆರೋಪ ಮಾಡುತ್ತಿರುವುದಕ್ಕೆ ಮಣಿಯದೇ, ಅದೇ ಸ್ಥಾನದಲ್ಲಿ ಮುಂದುವರೆಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಛಲವಾದಿ ಕ್ಷೇಮಾಭಿವೃದ್ಧಿ ವೇದಿಕೆ ಒತ್ತಾಯಿಸಿದೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ವ್ಯವಸ್ಥಾಪಕರಾಗಿ ಕಾಳೆ ಅವರು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೈಯಕ್ತಿಕ ದ್ವೇಷದಿಂದ ಅವರ ವಿರುದ್ಧ ಆರೋಪ ಮಾಡಲಾಗುತ್ತಿದೆ. ಕಳೆದ ನಾಲ್ಕು ತಿಂಗಳಿಂದ ಸಂಬಂಧಪಟ್ಟ ಅಧಿಕಾರಿಗೆ ತೊಂದರೆ ನೀಡಲಾಗುತ್ತಿದೆ. ಈರಣ್ಣ ಭಂಡಾರಿ ಅವರು ಇದರ ಹಿಂದೆ ನಿಂತು ಆರೋಪ ಮಾಡುತ್ತಿದ್ದಾರೆ.
ತಮ್ಮ ಅನುಕೂಲಕ್ಕೆ ಬೇಕಾದ ಅಧಿಕಾರಿಗಳನ್ನು ಈ ಸ್ಥಾನಕ್ಕೆ ತಂದು ತಮ್ಮ ಕೆಲಸ ಕಾರ್ಯಗಳನ್ನು ಮುಂದುವರೆಸಬೇಕೆಂಬ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ಖಾಲಿಯಿರುವ ಹುದ್ದೆಗಳ ಪ್ರಭಾರಿ ನೀಡುವುದು ವಾಡಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕಾಳೆ ಅವರಿಗೆ ಪ್ರಭಾರಿ ನೀಡಲಾಗಿದೆ. ತಕ್ಷಣವೇ ಅವರನ್ನು ಅಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ.ವಸಂತ, ಪುಷ್ಪರಾಜ, ರಾಘವೇಂದ್ರ, ಹನುಮಂತ ಸೀಕಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment