ಕಾಳಿ ನದಿ ದಂಡೆಯಲ್ಲಿ ಫ್ಲೈಯಿಂಗ್ ಫಿಶ್ ಬೋಟ್…

ಇಲ್ಲಿನ ಕೋಡಿಬಾಗ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ಕಾಳಿ ನದಿ ಗಾರ್ಡನ್ ಬಳಿಯ ಪ್ರವಾಸಿ ಚಟುವಟಿಕೆಗಳಿಗೆ ಜಲಸಾಹಸದ ಫ್ಲೈಯಿಂಗ್ ಫಿಶ್ ಬೋಟ್ ಸೇರಿಕೊಂಡಿದ್ದು, ಇದೀಗ ಪ್ರವಾಸಿಗರನ್ನು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಮಳೆಗಾಲ ಇನ್ನೇನು ಬಂದೇ ಬಿಟ್ಟಿತು ಎಂಬ ಹೊಸ್ತಿಲಲ್ಲಿ ಇರುವಾಗಲು ಸಹ ಕಾಳಿ ನದಿ ದಂಡೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಕ್ರಿಯೆಗಳು ಜಿಲ್ಲಾಡಳಿತದಿಂದ ನಡೆಯುತ್ತಿವೆ. ಮಳೆಗಾಲದ ನಂತರ ಸಮುದ್ರ ಜಲಸಾಹಸದ ಜೊತೆ ಕಾಳಿ ನದಿಯಲ್ಲಿ ಜಲಸಾಹಸ ಪ್ರವಾಸೋದ್ಯಮ ಪ್ರೋತ್ಸಾಹಕ್ಕೆ ಬೇಕಾಗುವ ಎಲ್ಲಾ ಪ್ರಕ್ರಿಯೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಜಲಸಾಹಸ ಕ್ರೀಡೆಗಳಲ್ಲಿ ಪ್ಲೈಯಿಂಗ್ ಫಿಶ್ ಎನ್ನುವ ನೂತನ ಜಲ ಕ್ರೀಡೆಯೊಂದನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಪ್ರವಾಸಿಗರ ಮುಂದಿಡಲಾಗಿದೆ. ಗೋವಾದ ಕಮರ್ಷಿಯಲ್ ಮನಸ್ಥಿತಿಗೆ ಸೆಡ್ಡು ಹೊಡೆಯುವಂತೆ ಇಲ್ಲಿ ಪ್ರವಾಸಿ ಸ್ನೇಹಿ ಜಲಸಾಹಸ ಕ್ರೀಡೆಗಳ ಮೂಲಕ ಪ್ರವಾಸಿಗರನ್ನು ಸೆಳೆಯುವ ಯತ್ನ ನಡೆದಿದೆ.

ಫ್ಲೈಯಿಂಗ್ ಫಿಶ್ ಬೋಟ್ ನೀರಿನ ಮೇಲ್ಮೈಯಿಂದ ೩ ಅಡಿ ಎತ್ತರಕ್ಕೆ ಹಾರುವ ಬಲೂನು ಆಕಾರದ ಫಿಶ್ ರೂಪದಲ್ಲಿದ್ದು ಅದನ್ನು ೧೫೦೦ ಹೆಚ್.ಪಿ. ಸಾಮರ್ಥ್ಯದ ಜೆಟ್‌ಸ್ಕೀ ಬೋಟ್‌ಗೆ ಕಟ್ಟಿ ವೇಗದಲ್ಲಿ ನದಿಯ ಮೇಲೆ ಓಡಿಸಲಾಗುತ್ತದೆ. ಫ್ಲೈಯಿಂಗ್ ಫಿಶ್ ಬಲೂನ್ ಮೇಲೆ ಮೂವರು ಜಲಸಾಹಸಿಗಳು ಕುಳಿತುಕೊಳ್ಳಬಹುದಾಗಿದೆ.

ಫ್ಲೈಯಿಂಗ್ ಫಿಶ್ ಬೋಟ್ ಗಟ್ಟಿಯಾಗಿ ಹಿಡಿದುಕೊಳ್ಳಲು ಅನುಕೂಲವಾಗುವಂತೆ ಬಲೂನಿಗೆ ಹಿಡಿಕೆ ಅಳವಡಿಸಲಾಗಿದೆ. ಅಲ್ಲದೆ ಸುರಕ್ಷತೆ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ಲೈಫ್ ಜಾಕೇಟ್ ನೀಡಲಾಗುತ್ತದೆ. ಜೆಟ್‌ಸ್ಕೀ ವೇಗವಾಗಿ ಚಲಿಸಿದಂತೆ ಗಾಳಿಯ ಒತ್ತಡವನ್ನು ಸೀಳಿಕೊಂಡು ಹಾರುವ ಪ್ಲೈಯಿಂಗ್ ಬಲೂನ್ ಫಿಶ್ ಜಲಸಾಹಸಿಗನನ್ನು ರೋಮಾಂಚನಗೊಳಿಸುತ್ತದೆ.

ಮೂವರಿಗೆ ೧೦೦೦ ರೂ:
ನದಿಯಲ್ಲಿ ಸುಮಾರು ೧೦ ನಿಮಿಷ ಒಂದು ಸುತ್ತು ಹಾಕಲು ಮೂರು ಜನ ಪ್ರವಾಸಿಗರಿಗೆ ಸೇರಿ ೧೦೦೦ ರೂ. ಶುಲ್ಕವಿದೆ. ೧೮ ವರ್ಷ ಮೇಲ್ಪಟ್ಟವರಿಗೆ ಮಾತ್ರ ಜಲಸಾಹಸದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ೬ ಜನ ಒಟ್ಟಿಗೆ ಜಲಸಾಹಸ ಮಾಡುವ ಪ್ಲೈಯಿಂಗ್ ಫಿಶ್ ವ್ಯವಸ್ಥೆ ಮಳೆಗಾಲದ ನಂತರ ಬರಲಿದೆ.

ಇಂತಹ ಫ್ಲೈಯಿಂಗ್ ಫಿಶ್ ಜಲಸಾಹಸ ಸೌಲಭ್ಯ ಮಹಾರಾಷ್ಟ್ರದ ಅಲಿಬಾಗ್‌ದಲ್ಲಿ ಬಿಟ್ಟರೆ ಕಾರವಾರದಲ್ಲಿ ಮಾತ್ರ ಆರಂಭವಾಗಿದೆ. ಕಾಳಿ ನದಿ ಗಾರ್ಡನ್ ಪ್ರವಾಸಿಗರಿಗೆ ನೆಚ್ಚಿನ ತಾಣವಾಗುತ್ತಿದ್ದಂತೆ ಸುಂದರ ಉದ್ಯಾನವನ ತಲೆ ಎತ್ತಿದೆ. ಬನಾನಾ ಬೋಟ್, ಬಂಪ್ ರೈಡ್, ಸ್ಪೀಡ್ ಬೈಕ್ ರೈಡ್, ಜೆಟ್‌ಸ್ಕೀ, ಕಯಾಕಿಂಗ್‌ನಂತಹ ಜಲಸಾಹಸ ಚಟುವಟಿಕೆಗಳು ಈಗಾಗಲೇ ಪ್ರಾರಂಭವಾಗಿವೆ.

ನಗರದ ಅಂಚಿಗೆ ಹೊಂದಿಕೊಂಡೇ ಇರುವ ಕಾಳಿ ನದಿ ಗಾರ್ಡನ್ ಪ್ರವಾಸಿಗರನ್ನು ಹಾಗೂ ಜಲಸಾಹಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಗಾರ್ಡ್‌ನಲ್ಲಿ ಪುಟ್‌ಪಾತ್, ಕುಳಿತುಕೊಳ್ಳಲು ಆಸನ, ಮಕ್ಕಳ ಆಟಿಕೆಗಳು, ಬಗೆ ಬಗೆಯ ಅಲಂಕಾರಿಕ ಗಿಡಗಳು ಹಾಗೂ ವಿದ್ಯುತ್ ದೀಪಾಲಂಕರ ಉದ್ಯಾನವನದ ಹಸಿರು ಹುಲ್ಲು ಹಾಸು ಹೊಸ ಅನುಭವವನ್ನು ಸ್ಥಳೀಯರಿಗೆ ನೀಡತೊಡಗಿದೆ.

Leave a Comment