ಕಾಲ್ಪನಿಕ ವೇತನ ವರದಿ ಜಾರಿಗೆ ಆಗ್ರಹ

ಬೆಂಗಳೂರು, ಅ.೧೧- ಅನುದಾನಿತ ನೌಕರರ ಕಾಲ್ಪನಿಕ ವೇತನ ಸಮಸ್ಯೆ ಪರಿಹಾರ ಕುರಿತು ಬಸವರಾಜ ಹೊರಟ್ಟಿ ಅವರ ’ಕಾಲ್ಪನಿಕ ವೇತನ’ ವರದಿ ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ನಗರದಲ್ಲಿಂದು ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೂ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಹಳೇ ಪಿಂಚಣಿ ಯೋಜನೆ ನೀಡುವಂತೆ ಕೋರಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಹನುಮಂತಪ್ಪ, ರಾಜ್ಯದಲ್ಲಿನ ಅನುದಾನಿತ ಶಾಲೆಗಳಲ್ಲಿ ೨೦೦೬ಕ್ಕಿಂತ ಮುಂಚಿನಿಂದಲೂ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ರಾಜ್ಯ ಸರ್ಕಾರ ಪಿಂಚಣಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.

ಸರ್ಕಾರ ೨೦೦೬ ಏಪ್ರಿಲ್ ೧ರಂದು ನೂತನ ಪಿಂಚಣಿ ಯೋಜನೆ ಜಾರಿ ಮಾಡಿತು. ೨೦೦೬ರಲ್ಲಿ ನೇಮಕರಾಗಿ ತದನಂತರದ ವರ್ಷಗಳಲ್ಲಿ ನೇಮಕಾತಿ ಪತ್ರ ಪಡೆದಿರುವ ನೌಕರರು ರಾಜ್ಯದಲ್ಲಿದ್ದಾರೆ. ಅವರಿಗೆ ಹೊಸ ಯೋಜನೆ ಅನ್ವಯಿಸಲಾಗಿದೆ. ಇದರಿಂದಾಗಿ ಅವರು ಮಾಸಿಕ ಪಿಂಚಣಿಯಿಂದ ವಂಚಿತರಾಗಿದ್ದಾರೆ’ ಎಂದರು.

ಸಂಘದ ಗೌರವಾಧ್ಯಕ್ಷ ರಿಯಾಜ್ ಅಹ್ಮದ್ ಸನದಿ ಮಾತನಾಡಿ, ಸರ್ಕಾರ ಹಿರಿಯ ನಾಗರಿಕರಿಗೆ ನಿರ್ದಿಷ್ಟ ಮೊತ್ತದ ಪಿಂಚಣಿ ನೀಡುವ ಯೋಜನೆಗಳನ್ನು ರೂಪಿಸಿದೆ. ಹತ್ತಾರು ವರ್ಷಗಳ ಕಾಲ ಮಕ್ಕಳಿಗೆ ವಿದ್ಯೆ?ಬೋಧಿಸಿದ ಶಿಕ್ಷಕರಿಗೆ ಪಿಂಚಣಿ ಯೋಜನೆ ರೂಪಿಸಿಲ್ಲ. ಇದರಿಂದಾಗಿ ಅವರ ಕೊನೆಗಾಲದಲ್ಲಿ ಸಾಮಾಜಿಕ ಭದ್ರತೆ ಇಲ್ಲವಾಗಿದೆ’ ಎಂದು ಅಳಲು ತೊಡಿಕೊಂಡರು.

ಹೊಸ ಪಿಂಚಣಿ ಯೋಜನೆಯಿಂದಾಗಿ ಸುಮಾರು ೩೫ ಸಾವಿರ ಶಿಕ್ಷಕರು ಮಾಸಿಕ ಪಿಂಚಣಿಯಿಂದ ವಂಚಿತರಾಗಿದ್ದಾರೆ. ಪಿಂಚಣಿ ಇಲ್ಲದೆ ಈಗಾಗಲೇ ನಿವೃತ್ತಿಯಾಗಿರುವವರಿಗೆ ಮತ್ತು ಸೇವೆಯಲ್ಲಿ ಇರುವಾಗಲೇ ಸಾವನಪ್ಪಿದ ಶಿಕ್ಷಕರ ಕುಟುಂಬದ ಸದಸ್ಯರಿಗೆ ಪಿಂಚಣಿ ನೀಡಬೇಕು. ನೂತನ ಪಿಂಚಣಿ ಯೋಜನೆಯಲ್ಲಿನ ಗೊಂದಲಗಳನ್ನು ನಿವಾರಿಸಬೇಕು’ ಎಂದು ಒತ್ತಾಯಿಸಿದರು.
‘ಖಾಸಗಿ ಶಾಲೆಯೊಂದನ್ನು ಅನುದಾನಕ್ಕೆ ಒಳಪಡಿಸುವಾಗ ಸರ್ಕಾರ ಇಷ್ಟು ವಿಸ್ತೀರ್ಣದ ಮೈದಾನ, ಗ್ರಂಥಾಲಯ ಮತ್ತು ಪ್ರಯೋಗಾಲಯ ಇರಬೇಕು ಎಂಬ ಮಾನದಂಡ ವಿಧಿಸುತ್ತದೆ. ಆದರೆ ಈ ನಿಯಮಗಳನ್ನು ಸರ್ಕಾರಿ ಶಾಲೆಗಳಿಗೆ ಏಕೆ ಅನ್ವಯಿಸುವುದಿಲ್ಲ.?

– ಶ್ರೀರಾಮ್, ಹಿರಿಯ ಶಿಕ್ಷಕ

Leave a Comment