ಕಾಲೇಜಿನಲ್ಲೇ ಗಾಂಜಾ ಮಾರಾಟ ಇಂಜಿನಿಯರಿಂಗ್ ವಿದ್ಯಾರ್ಥಿ ಸೇರಿ ಐವರ ಸೆರೆ

ಬೆಂಗಳೂರು, ಸೆ. ೮- ಕಾಲೇಜಿನಲ್ಲಿಯೇ ಗಾಂಜಾ ಮಾರಾಟ ಮಾಡುತ್ತಿದ್ದ ಇಂಜಿನಿಯರ್ ವಿದ್ಯಾರ್ಥಿ ಸೇರಿ ಐವರನ್ನು ಬಂಧಿಸುವಲ್ಲಿ ಕೋರಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರ ಮೂಲದ ಲಕ್ಷ್ಮಣ್ ಅಲಿಯಾಸ್ ಅರ್ಜುನ್ (23), ಕಂಚರ ಪಾಳ್ಯದ ಮಣಿಕಂಠ (23), ಅನ್ನಸಂದ್ರಪಾಳ್ಯದ ಜುಬೇರ್ ಪಾಷ (32), ರಾಜಾಜಿನಗರದ ಶಿವಪ್ರಸಾದ್ (25), ಕುಮಾರಸ್ವಾಮಿ ಲೇಔಟ್‌ನ ಶ್ರೇಯಸ್ (20) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ ಎರಡೂವರೆ ಕೆಜಿ ಗಾಂಜಾ, ಮಾರುತ್ ಹೊಮ್ನಿ ಕಾರು, ಒಂದೂವರೆ ಸಾವಿರ ನಗದು, ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.
ಆರೋಪಿ ಮಣಿಕಂಠ ವಿಶಾಖಪಟ್ಟಣದ ಲಕ್ಷ್ಮಣ್ ಎಂಬಾತನಿಂದ ಗಾಂಜಾ ಖರೀದಿಸಿಕೊಂಡು ಬಂದು ನಗರದ ಜುಬೇರ್ ಜತೆ ಸೇರಿ ಸಾಫ್ಟ್‌ವೇರ್ ಉದ್ಯೋಗಿಗಳು, ಇಂಜಿನಿಯರ್ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು.
ದಯಾನಂದ್ ಸಾಗರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಶ್ರೇಯಸ್, ಗಾಂಜಾ ವ್ಯಸನಿಯಾಗಿದ್ದು, ಹೆಚ್ಚಿನ ಹಣ ಸಂಪಾದಿಸಲು ಆರೋಪಿ ಶಿವಪ್ರಸಾದ್ ಜತೆ ಸೇರಿ ಗಾಂಜಾ ಖರೀದಿಸಿ ಇಂಜಿನಿಯರಿಂಗ್ ಕಾಲೇಜಿನಲ್ಲೇ ಗಾಂಜಾ ವ್ಯಾಪಾರ ಮಾಡುತ್ತಿದ್ದನು.
ಗಾಂಜಾ ವ್ಯಸನಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ಕೋರಮಂಗಲ ಪೊಲೀಸ್ ಇನ್ಸ್‌ಸ್ಪೆಕ್ಟರ್ ಮಂಜುನಾಥ್ ಅವರು ಕೋರಮಂಗಲ 8ನೇ ಬ್ಲಾಕ್‌ನ ಬಿಬಿಎಂಪಿ ಅಂಬೇಡ್ಕರ್ ಪಾರ್ಕ್ ಬಳಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರಿಗೆ ಕೋರಮಂಗಲದ ಅಂಬೇಡ್ಕರ್ ಪಾರ್ಕ್ ಬಳಿ ಗಾಂಜಾ ಮಾರಾಟ ಮಾಡುತಿದ್ದ ವಿಷಯ ತಿಳಿದು ದಾಳಿ ನಡೆಸಿದ್ದಾರೆ. ಬಂಧಿತ ಅರೋಪಿಗಳಿಂದ 3.5 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿ, ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

Leave a Comment